ಮಾಸ್ಕೋ:ಸಾಂವಿಧಾನಿಕ ಬದಲಾವಣೆಗೆ ರಾಷ್ಟ್ರವ್ಯಾಪಿ ಮತ ಚಲಾಯಿಸುವ ಪ್ರಕ್ರಿಯೆ ನನ್ನ ಆಡಳಿತಾಧಿಕಾರವನ್ನು ವಿಸ್ತರಿಸುವ ಸಲುವಾಗಿ ಅಲ್ಲ, ಬದಲಾಗಿ ಮುಂದಿನ ಯೋಜನೆಗಳ ಕುರಿತು ಎಂದುರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಂಗಳವಾರ ತಿಳಿಸಿದ್ದಾರೆ.
ವ್ಲಾಡಿಮಿರ್ ಪುಟಿನ್ ಅವರು ಸಾಂವಿಧಾನ ತಿದ್ದುಪಡಿಯ ಪ್ರಸ್ತಾಪ ಮಾಡಿದ್ದಾರೆ.2024ರಲ್ಲಿ ಪುಟಿನ್ ಅವರ ಅಧಿಕಾರಾವಧಿ ಮುಗಿಯಲಿದೆ. ಮುಂಬರುವ ದಿನಗಳಲ್ಲಿ ರಾಜಕೀಯ ರಂಗದಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳುವ ಸಲುವಾಗಿ ಇಂತಹ ಪ್ರಯತ್ನ ಮಾಡಿದ್ದಾರೆಂದು ಕ್ಲೆಮಿನ್ ಟೀಕಿಸಿದ್ದಾರೆ. ಅಲ್ಲದೇ, ಸಾಂವಿಧಾನಿಕ ಬದಲಾವಣೆಗಳನ್ನು ಹೇಗೆ ಮಾಡಬಹುದೆಂದು ಇನ್ನೂ ನಿಖರವಾಗಿ ಸ್ಪಷ್ಟಪಡಿಸಿಲ್ಲವೆಂದು ಆಕ್ರೋಶ ಹೊರಹಾಕಿದ್ದಾರೆ.
ಶಿಕ್ಷಕರು ಮತ್ತು ಮಕ್ಕಳೊಂದಿಗಿನ ಸಭೆಯೊಂದರಲ್ಲಿ, ಈ ಮತಗಳನ್ನು ನಿಮ್ಮ ಅಧಿಕಾರವನ್ನು ವಿಸ್ತರಿಸಲು ಬಳಸಬಹುದೇ ಎಂಬ ಪ್ರಶ್ನೆಗೆ ಪುಟಿನ್ 'ಇಲ್ಲ' ಎಂದು ಉತ್ತರಿಸಿದ್ದಾರೆ. ನಾನು ಯಾವುದೇ ಅಧಿಕಾರದಾಸೆಗೆ ಈ ಬದಲಾವಣೆ ಮಾಡಲೊರಟಿಲ್ಲ, ರಾಷ್ಟ್ರ ಮುಖ್ಯಸ್ಥರ ಚುನಾವಣೆಯು ಸ್ಪರ್ಧಾತ್ಮಕತೆ ಆಧಾರದಲ್ಲಿ ನಡೆಯಬೇಕೆಂದು ಉತ್ತರಿಸಿದರು. ಜೊತೆಗೆ ಮೂರು ತಿಂಗಳಲ್ಲಿ ಈ ಪ್ರಕ್ರಿಯೆ ಮುಗಿಯಲಿದೆ ಎಂದು ಕೂಡ ಸ್ಪಷ್ಟಪಡಿಸಿದರು.
ಪುಟಿನ್ ಅವರ ಅಧಿಕಾರ ಮುಗಿದ ಬಳಿಕ ಈ ತಿದ್ದುಪಡಿಗಳನ್ನು ಬಳಸಿ ಅಧಿಕಾರ ಮುಂದುವರೆಸುತ್ತಾರೆಯೇ ಎನ್ನುವ ಪ್ರಶ್ನೆ ಮಾತ್ರವಲ್ಲದೇ, ಅಧಿಕಾರವಧಿ ನಾಲ್ಕು ವರ್ಷಗಳಲ್ಲಿ ಮುಗಿಯಲಿದ್ದು ಸದ್ಯ ಇಂತಹ ತಿದ್ದುಪಡಿಗಳನ್ನು ತರುತ್ತಿರುವುದೇಕೆ ಎನ್ನುವ ಪ್ರಶ್ನೆ ಕೂಡಾ ರಷ್ಯಾದ ಜನರಲ್ಲಿ ಮೂಡಿದೆ.
ಶಾಸಕರು ಮತ್ತು ಪುಟಿನ್ ರಚಿಸಿದ ಕಾರ್ಯನಿರತ ಗುಂಪು ಈಗಾಗಲೇ ಮೂಲ ಕರಡು ರೂಪುರೇಷೆಗಳ ಜೊತೆಗೆ ವಿವಿಧ ಪ್ರಸ್ತಾಪಗಳನ್ನು ತಂದಿದೆ. ಸಾಂವಿಧಾನಿಕ ತಿದ್ದುಪಡಿಗಳ ಕೆಲಸ ಪೂರ್ಣಗೊಂಡ ನಂತರ, ಅದನ್ನು ರಾಷ್ಟ್ರವ್ಯಾಪಿ ಮತದಾನಕ್ಕೆ ಒಳಪಡಿಸಲಾಗುತ್ತದೆ. ಆದ್ರೆ ಅದನ್ನು ಹೇಗೆ ಆಯೋಜಿಸಲಾಗುತ್ತದೆ ಮತ್ತು ಹೇಗೆ ಅನುಷ್ಠಾನಗೊಳಿಸುತ್ತಾರೆ ಎಂಬುದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ.