ಮೆಲ್ಬರ್ನ್ (ಆಸ್ಟ್ರೇಲಿಯಾ): ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ, ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದ ದಶಕದ ಏಕದಿನ ಕ್ರಿಕೆಟ್ ತಂಡದ ನಾಯಕನ ಗೌರವಕ್ಕೆ ಪಾತ್ರರಾದರೆ, ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕನಾಗಿದ್ದಾರೆ.
2010ರಿಂದ 2019ರವರೆಗಿನ ಆಟಗಾರರ ಪ್ರದರ್ಶನವನ್ನಾದರಿಸಿ ಏಕದಿನ ಹಾಗು ಟೆಸ್ಟ್ ತಂಡಗಳನ್ನು ಮಂಗಳವಾರ ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದೆ. ಏಕದಿನ ತಂಡದಲ್ಲಿ ಮೂವರು ಭಾರತೀಯ ಆಟಗಾರರಿದ್ದಾರೆ. ಧೋನಿ ಹೊರತಾಗಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇದ್ದಾರೆ. ಇನ್ನು ಟೆಸ್ಟ್ ತಂಡದಲ್ಲಿ ವಿರಾಟ್ ಕೊಹ್ಲಿ ಇದ್ದಾರೆ.
ಧೋನಿಯನ್ನು ಹೊಗಳಿರುವ ಸಿಎ, ಇತ್ತೀಚೆಗೆ ಧೋನಿಯವರ ಆಟದ ಕ್ಷಮತೆ ಕುಗ್ಗಿತ್ತಾದರೂ ಭಾರತದ ಏಕದಿನ ಕ್ರಿಕೆಟ್ನ ಸುವರ್ಣ ಅವಧಿಯಲ್ಲಿ ತಂಡಕ್ಕೆ ಪ್ರಬಲ ಶಕ್ತಿಯಾಗಿದ್ದರು. 2011ರ ವಿಶ್ವಕಪ್ನಲ್ಲಿ ಭಾರತವನ್ನು ಗೆಲ್ಲಿಸಿ ಜಗತ್ತಿಗೆ ತಮ್ಮ ಶ್ರೇಷ್ಠತೆಯನ್ನು ತೋರಿಸಿಕೊಟ್ಟು, ಭಾರತದ ಫೈನಲ್ ಫಿನಿಶರ್ ಆದರು ಎಂದು ಹೇಳಿದೆ.
38 ವರ್ಷದ ಧೋನಿ, ಕ್ರಿಕೆಟ್ ವೃತ್ತಿ ಜೀವನದಲ್ಲಿ 15 ವರ್ಷಗಳನ್ನು ಪೂರೈಸಿದ್ದಾರೆ. ಡಿಸೆಂಬರ್ 23, 2004ರಂದು ಎಂ.ಎಸ್.ಡಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಐಸಿಸಿಯ ಎಲ್ಲಾ ಮೂರು ಕ್ರಿಕೆಟ್ ಟ್ರೋಫಿಗಳನ್ನು ಗೆದ್ದುಕೊಟ್ಟ ವಿಶ್ವದ ಏಕೈಕ ನಾಯಕ ಎಂಬ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ.