ಮಾಸ್ಕೋ: ರಷ್ಯಾದ ಆಡಳಿತ ಪಕ್ಷವು ರಾಷ್ಟ್ರೀಯ ಸಂಸತ್ ಚುನಾವಣೆಯಲ್ಲಿ 450ರಲ್ಲಿ 324 ಸ್ಥಾನಗಳನ್ನು ಪಡೆದಿದೆ ಎಂದು ಚುನಾವಣಾ ಅಧಿಕಾರಿಗಳು ಮಂಗಳವಾರ ಘೋಷಿಸಿದ್ದಾರೆ. ಇನ್ನು ಹಲವಾರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ವಿರೋಧ ಪಕ್ಷದ ಹೆಚ್ಚಿನ ರಾಜಕಾರಣಿಗಳನ್ನು ಸಂಸತ್ ಚುನಾವಣೆಯಿಂದ ಹೊರಗಿಡಲಾಗಿತ್ತು.
ಯುನೈಟೆಡ್ ರಷ್ಯಾ ಪಕ್ಷಕ್ಕೆ ಚುನಾವಣೆಯಲ್ಲಿ ಶೇ. 49.8 ಮತಗಳು ಬಂದಿದೆ. ಡುಮಾದ 225 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟಾರೆ 198 ರಷ್ಯಾ ಯುನೈಟೆಡ್ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದಾರೆ.
ಯುನೈಟೆಡ್ ರಷ್ಯಾ ಪಕ್ಷಕ್ಕೆ 324 ಸ್ಥಾನಗಳು ಲಭಿಸಿವೆ ಎಂದು ರಷ್ಯಾದ ಕೇಂದ್ರ ಚುನಾವಣಾ ಆಯೋಗವು ಹೇಳಿದೆ. ಆದರೆ, 2016ರ ಚುನಾವಣೆಯಲ್ಲಿ ಗೆದ್ದ ಸೀಟುಗಳಿಗಿಂತ 19 ಸ್ಥಾನಗಳು ಕಡಿಮೆ ಎಂದು ತಿಳಿದು ಬಂದಿದೆ.
ಡುಮಾದಲ್ಲಿ ಕ್ರೆಮ್ಲಿನ್ ಪಕ್ಷ 2024ರ ರಷ್ಯಾ ಅಧ್ಯಕ್ಷೀಯ ಚುನಾವಣೆಗೆ ಮುಂಚಿತವಾಗಿ ಮತ್ತೆ ಬಹುಮತ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನು 2024ಕ್ಕೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಅಧಿಕಾರದ ಅವಧಿ ಮುಕ್ತಾಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಅಧಿಕಾರದಲ್ಲಿ ಮತ್ತೆ ಮುಂದುವರಿಯಲು ಅವರು ಮರು ಚುನಾವಣೆಯನ್ನು ಮಾಡಬಹುದು ಅಥವಾ ಬೇರೊಂದು ತಂತ್ರವನ್ನು ಸಹ ಆಯ್ಕೆ ಮಾಡಬಹುದು ಎಂದು ಮೂಲಗಳು ತಿಳಿಸಿದೆ.