ನವದೆಹಲಿ:ಕೆಲವೇ ಕೆಲವು ದಿನಗಳಲ್ಲಿ ಉಕ್ರೇನ್ ಮಣಿಸಿಬಿಡಬಹುದು ಎಂಬ ಆಲೋಚನೆಯೊಂದಿಗೆ ರಷ್ಯಾಧ್ಯಕ್ಷ ಪುಟಿನ್ ಭೀಕರ ಯುದ್ಧ ಸಾರಿದ್ದು, ಎಂಟು ದಿನಗಳು ಕಳೆದರೂ ಆ ರಾಷ್ಟ್ರ ಶರಣಾಗದೇ ಪ್ರತಿರೋಧ ತೋರುತ್ತಿದೆ. ಇದೇ ವೇಳೆ ರಷ್ಯಾ ತನ್ನ ದಾಳಿಯ ವೇಗವನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಿದೆ. ಈ ದಾಳಿಯಲ್ಲಿ ನಿಷೇಧಿಸಲ್ಪಟ್ಟ ಶಸ್ತ್ರಗಳನ್ನು ರಷ್ಯಾ ಬಳಸುತ್ತಿರಬಹುದು ಎಂಬ ಗುಮಾನಿಗಳೂ ಕೂಡಾ ಹರಡುತ್ತಿವೆ.
ಅತ್ಯಂತ ಅಪಾಯಕಾರಿಯಾದ ನಿಷೇಧಿಸಲ್ಪಟ್ಟ ಶಸ್ತ್ರಗಳನ್ನು ರಷ್ಯಾ ಬಳಸುತ್ತಿದೆ ಎಂದು ಮಾನವ ಹಕ್ಕುಗಳ ಗುಂಪುಗಳು ಮತ್ತು ಉಕ್ರೇನ್ ಸರ್ಕಾರ ಆರೋಪ ಮಾಡುತ್ತಿವೆ. ವಿಷಕಾರಕ ಲೋಹದ ಪುಡಿಯನ್ನು ಹೊಂದಿರುವ ಈ ಶಸ್ತ್ರಗಳು ಬಾಂಬ್ ರೀತಿಯಲ್ಲೇ ಇರುತ್ತವೆಯಾದರೂ, ಅತ್ಯಧಿಕ ಪ್ರಮಾಣದಲ್ಲಿ ಬೆಂಕಿ ಉಗುಳುವ ಸಾಮರ್ಥ್ಯ ಹೊಂದಿವೆ. ಇವುಗಳನ್ನು ಥರ್ಮೋಬ್ಯಾರಿಕ್ ಶಸ್ತ್ರಗಳು ಎಂದು ಕರೆಯಲಾಗುತ್ತದೆ.
ಥರ್ಮೋಬ್ಯಾರಿಕ್ ಶಸ್ತ್ರಗಳೆಂದರೇನು? ಹೇಗೆ ಕೆಲಸ ಮಾಡುತ್ತವೆ?:ಥರ್ಮೋಬ್ಯಾರಿಕ್ ಎಂಬ ಪದ ಗ್ರೀಕ್ ಭಾಷೆಯ ಥರ್ಮೋ ಮತ್ತು ಬ್ಯಾರಿಕ್ ಎಂಬ ಎರಡು ಪದಗಳಿಂದ ಬಂದಿದೆ. ಥರ್ಮೋ ಎಂದರೆ ಉಷ್ಣ ಮತ್ತು ಬ್ಯಾರಿಕ್ ಎಂದರೆ ಒತ್ತಡ ಎಂದು ಅರ್ಥ. ಈ ಶಸ್ತ್ರಗಳು ಬಾಂಬ್ಗಳ ಮಾದರಿಯಲ್ಲಿದ್ದು, ಒತ್ತಡದ ಮೂಲಕ ಮತ್ತಷ್ಟು ಉಷ್ಣವನ್ನು ಬಿಡುಗಡೆ ಮಾಡುತ್ತವೆ. ಈ ಶಸ್ತ್ರಗಳು ವಾತಾವರಣದಲ್ಲಿನ ಆಮ್ಲಜನಕವನ್ನೇ ಹೆಚ್ಚಾಗಿ ಬಳಸಿಕೊಳ್ಳುತ್ತವೆ.
ಬೆಂಕಿ ಉರಿಯಬೇಕಾದರೆ, ಆಮ್ಲಜನಕ ಅತ್ಯಂತ ಮುಖ್ಯ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಆಮ್ಲಜನಕ ಇಲ್ಲದೇ ಯಾವುದೇ ಬಾಂಬ್ ಸ್ಫೋಟಗೊಂಡರೂ, ಅಲ್ಲಿ ಬೆಂಕಿ ಉಂಟಾಗುವುದಿಲ್ಲ. ಸ್ವಲ್ಪ ಪ್ರಮಾಣದಲ್ಲಿ ಬೆಂಕಿ ಉಂಟಾದರೂ, ಅದರು ಸ್ವಲ್ಪ ಸಮಯದವರೆಗೆ ಮಾತ್ರ ಇರುತ್ತದೆ. ಹೆಚ್ಚಿನ ಅವಘಡವೇನೂ ಸಂಭವಿಸುವುದಿಲ್ಲ. ಆದ್ದರಿಂದ ಸಾಮಾನ್ಯ ಬಾಂಬ್ಗಳಲ್ಲಿ 25ರಷ್ಟು ಪೆಟ್ರೋಲ್, ಡೀಸೆಲ್ ಅಥವಾ ಇನ್ನಾವುದೇ ಇಂಧನದಂಥ ವಸ್ತು ಮತ್ತು 75ರಷ್ಟು ಆಕ್ಸಿಡೈಸರ್ ಇರುತ್ತದೆ. ಇದರಿಂದ ಬಾಂಬ್ಗಳು ಸ್ಫೋಟಗೊಂಡು ಬೆಂಕಿ ಹೊತ್ತಿ ಉರಿಯುತ್ತದೆ.
ಈಗ ರಷ್ಯಾ ಬಳಸುತ್ತಿದೆ ಎನ್ನಲಾದ ಥರ್ಮೋಬ್ಯಾರಿಕ್ ಶಸ್ತ್ರಗಳು ಸಾಮಾನ್ಯ ಬಾಂಬ್ಗಳಂತೆ ಅಲ್ಲ. ಅವುಗಳಲ್ಲಿ ಆಮ್ಲಜನಕ ಇರುವುದಿಲ್ಲ. ಈ ಬಾಂಬ್ಗಳಲ್ಲಿ ಶೇಕಡಾ 100ರಷ್ಟು ಇಂಧನ ಇರುತ್ತದೆ. ಆದರೆ ಈ ಬಾಂಬ್ಗಳು ವಾತಾವರಣದಲ್ಲಿನ ಆಮ್ಲಜನಕವನ್ನೇ ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಆದ್ದರಿಂದ ಇಂಧನವೂ ಹೆಚ್ಚಿನ ಪ್ರಮಾಣದಲ್ಲಿ ಇರುವ ಕಾರಣದಿಂದಾಗಿ ಅತ್ಯಂತ ದೊಡ್ಡ ಮಟ್ಟದಲ್ಲಿ ಬೆಂಕಿ ಉಗುಳುವ ಸಾಮರ್ಥ್ಯ ಈ ಬಾಂಬ್ಗಳಿಗೆ ಇರುತ್ತದೆ. ಆದ್ದರಿಂದ ಹಾನಿಯ ಪ್ರಮಾಣವೂ ಹೆಚ್ಚಾಗಿರುತ್ತದೆ.
ಇದರಲ್ಲಿ ಅನೇಕ ವಿಷಕಾರಿ ಲೋಹಗಳ ಪುಡಿಗಳನ್ನು ಬಳಸಲಾಗುತ್ತದೆ. ಸ್ಫೋಟದ ಸ್ಥಳದಲ್ಲಿರುವವರು ಸುಟ್ಟು ಅಕ್ಷರಶಃ ಸುಟ್ಟು ಹೋಗುತ್ತಾರೆ. ಸ್ಫೋಟದ ಸ್ಥಳದ ಸಮೀಪದಲ್ಲಿರುವವರು, ಸ್ಫೋಟದಿಂದ ಗಾಯಕ್ಕೆ ಒಳಗಾದವರೂ, ವಿವಿಧ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಒಮ್ಮೊಮ್ಮೆ ಸಣ್ಣಪುಟ್ಟ ಗಾಯಗಳಿಗೆ ಒಳಗಾದವರ ದೇಹದೊಳಗಿನ ಅಂಗಗಳು ಕೆಲಸ ಮಾಡದಿರುವ ಸಾಧ್ಯತೆ ಇರುತ್ತದೆ. ಇನ್ನೂ ಕೆಲವೊಮ್ಮೆ ಕಿವುಡುತನ, ಕುರುಡುತನಕ್ಕೂ ಕಾರಣವಾಗಬಹುದು.