ಕಾಬೂಲ್ (ಅಫ್ಘಾನಿಸ್ತಾನ): ಒಂದೆಡೆ ದಿಕ್ಕು ತೋಚದ ಅಫ್ಘಾನಿಸ್ತಾನದ ಪ್ರಜೆಗಳು ಜೀವಭಯದಿಂದ ಪಲಾಯನವಾಗುತ್ತಿದ್ದರೆ, ಮತ್ತೊಂದಡೆ ಗೆಲುವಿನ ಬಳಿಕ ತಾಲಿಬಾನಿಗಳು ಮೋಜು-ಮಸ್ತಿಯಲ್ಲಿ ತೊಡಗಿದಂತೆ ಕಾಣಿಸುತ್ತದೆ. ಜಿಮ್‌ಗಳಲ್ಲಿ ಉಗ್ರರು ವ್ಯಾಯಾಮ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಅಧ್ಯಕ್ಷ ಅಶ್ರಫ್ ಘನಿಯು ದೇಶ ಬಿಟ್ಟು ಹೋಗುತ್ತಿದ್ದಂತೆ ರಾಜಧಾನಿ ಕಾಬೂಲ್ ವಶಕ್ಕೆ ಪಡೆಯುವ ಮೂಲಕ ತಾಲಿಬಾನ್ ಇಡೀ ಅಫ್ಘಾನಿಸ್ತಾನ ರಾಷ್ಟ್ರವನ್ನೇ ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಅಲ್ಲದೇ ನೂತನ ಸರ್ಕಾರ ರಚಿಸುವ ಉತ್ಸಾಹದಲ್ಲಿದ್ದಾರೆ. ಆದರೆ, ದಿಕ್ಕುತೋಚದಂತಾದ ಜನರು ಮಾತ್ರ ದೇಶ ತೊರೆಯುತ್ತಿದ್ದಾರೆ. ವಿದೇಶಗಳಿಗೆ ತೆರಳಲು ವಿಮಾನದ ರೆಕ್ಕೆ ಮೇಲೆಲ್ಲಾ ಕುಳಿತಿರುವ ದೃಶ್ಯಗಳನ್ನೂ ನಾವು ನೋಡಿದ್ದೇವೆ. ಕಾಬೂಲ್ ವಿಮಾನ ನಿಲ್ದಾಣವಂತೂ ಜನಸಂದಣಿಯಿಂದ ತುಂಬಿ ತುಳುಕುತ್ತಿದೆ.