ಬೀಜಿಂಗ್: ತೈವಾನ್‌ನ ಭದ್ರತೆಗೆ ಅಪಾಯವನ್ನುಂಟು ಮಾಡುವ ಚೀನಾ ಬೆದರಿಕೆಯ ಮಧ್ಯೆ, ದ್ವೀಪ ರಾಷ್ಟ್ರವು ಸಿಡಿದೆದ್ದಿದೆ. ದೇಶದ ರಕ್ಷಣಾ ಸಚಿವಾಲಯವು ಕ್ಷೀಪಣಿಗಳ ಅಣಕು ಆಕ್ರಮಣದ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.
ಚೀನಾ ಕಡೆಗೆ ಮುಖ ಮಾಡಿರುವ ತೈಚುಂಗ್‌ನ ದ್ವೀಪವೊಂದರ ಕಡಲ ತೀರದ ಬಳಿ ತೈವಾನ್ ಸೇನೆ ಸಮರಾಭ್ಯಾಸ ನಡೆಸಿತ್ತು. ಈ ಸಮರಾಭ್ಯಾಸದ ಸಂದರ್ಭದಲ್ಲಿ ತೈವಾನ್‌ನ ಯುದ್ಧ ವಿಮಾನಗಳು, ಹೆಲಿಕಾಪ್ಟರ್ಸ್ ಸಮುದ್ರಕ್ಕೆ ಕ್ಷಿಪಣಿ ಹಾಗೂ ಬಾಂಬ್‌ಗಳನ್ನು ಉಡಾಯಿಸುವ ಮೂಲಕ ಚೀನಾಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದವು. ಈ ವಿಡಿಯೋವನ್ನು ದಕ್ಷಿಣ ಚೀನಾದ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಕ್ಷಿಪಣಿ ದಾಳಿಯ ಅಣಕು ಪ್ರದರ್ಶನ ವಿಡಿಯೋ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ತೈವಾನ್ ಅಧ್ಯಕ್ಷೆ ತ್ಸೈ ಇಂಗ್-ವೆನ್, ನಾವು ನಮ್ಮ ದೇಶವನ್ನು ರಕ್ಷಿಸಿಕೊಳ್ಳಲು ಸಮರ್ಥರಾಗಿದ್ದೇವೆ. ನಮ್ಮ ರಾಷ್ಟ್ರೀಯ ಭದ್ರತೆಯನ್ನು ಕಾಪಾಡಿಕೊಳ್ಳಲು ನಮ್ಮ ಮಿಲಿಟರಿಗೆ ಸಾಧ್ಯವಿದೆ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.
"ಅತ್ಯಂತ ಅಹಂಕಾರಿ ದೇಶವು ಆಲೋಚನೆಯಿಲ್ಲದೆ ಯುದ್ಧವನ್ನು ಪ್ರಚೋದಿಸಬಹುದು ಮತ್ತು ಅಜ್ಞಾನಿ ಸರ್ಕಾರವು ಯುದ್ಧದ ಜ್ವಾಲೆಯಲ್ಲಿ ಸಿಲುಕಿಕೊಳ್ಳಬಹುದು. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಪದೇ ಪದೇ ಯುದ್ಧ ಪ್ರಚೋದಿಸುವುದನ್ನು ಇನ್ನು ಮುಂದೆ ಮಾಡುವುದಿಲ್ಲ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.