ಮಾಸ್ಕೋ: ರಷ್ಯಾದ ರಕ್ಷಣಾ ಸಚಿವಾಲಯವು ಗಮಾಲೆಯಾ ರಿಸರ್ಚ್ ಇನ್‌ಸ್ಟಿಟ್ಯೂಟ್ ಸಹಭಾಗಿತ್ವದಲ್ಲಿ ಕೋವಿಡ್-19 ಲಸಿಕೆ ಶೋಧಿಸಿದ್ದು, ದೇಶದಲ್ಲಿ ಬಳಕೆಗೆ ಅಧಿಕೃತವಾಗಿ ನೋಂದಣಿ ಮಾಡಲಾಗಿದೆ. ಈ ಲಸಿಕೆ ವೈರಾಣುವಿನ ವಿರುದ್ಧ ಹೇಗೆ ಕೆಲಸ ಮಾಡುತ್ತದೆ ಎಂಬುದೀಗ ಭಾರಿ ಕುತೂಹಲ ಕೆರಳಿಸುವ ವಿಚಾರ.
ರಷ್ಯಾ ಅಧ್ಯಕ್ಷರ ಇಬ್ಬರು ಪುತ್ರಿಯರಲ್ಲಿ ಒಬ್ಬರಿಗೆ ಈಗಾಗಲೇ ಈ ಔಷಧ ನೀಡಲಾಗಿದ್ದು, ಅದಕ್ಕವರ ದೇಹ ಉತ್ತಮವಾಗಿಯೇ ಸ್ಪಂದಿಸಿದೆ. ಇದನ್ನು ವೈದ್ಯರು ದಾಖಲಿಸಿಕೊಂಡಿದ್ದಾರೆ. ಇದರ ಜೊತೆಗೆ, ಪರೀಕ್ಷೆಗಳ ಸಮಯದಲ್ಲಿ ಲಸಿಕೆಯ ಸಾಮರ್ಥ್ಯ ಸಾಬೀತಾಗಿದ್ದು, ಕೊರೊನಾ ವೈರಸ್ನಿಂದ ಇದು ಶಾಶ್ವತವಾದ ಆರೋಗ್ಯ ಪರಿಹಾರ ನೀಡುತ್ತದೆ ಎನ್ನುವ ವಿಚಾರವನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
ಕೊರೊನಾ ವೈರಸ್ ಲಸಿಕೆಯನ್ನು ನೋಂದಾಯಿಸಿದ ವಿಶ್ವದ ಮೊದಲ ದೇಶ ರಷ್ಯಾ ಆಗಿದೆ. ಅನೇಕ ದೇಶಗಳ ವಿಜ್ಞಾನಿಗಳು 3ನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸುತ್ತಿರುವಾಗ ಲಸಿಕೆಯನ್ನು ಮುಂಚಿತವಾಗಿ ನೋಂದಣಿ ಮಾಡಿರುವುದಕ್ಕೆ ಹಲವರು ಚಕಾರವೆತ್ತಿದ್ದಾರೆ.
ರಷ್ಯಾದ ಕೊರೊನಾ ಲಸಿಕೆಯು ಅಡೆನೊವೈರಸ್ ಆಧಾರಿತ ವೈರಲ್ ವೆಕ್ಟರ್ ವ್ಯಾಕ್ಸಿನ್ ಆಗಿದೆ. ಇದು ದೇಹದಲ್ಲಿ ಪ್ರತಿರಕ್ಷಣಾ ಪ್ರತಿಕ್ರಿಯೆ ಉಂಟುಮಾಡಲು ಸಾರ್ಸ್- ಕೊವಿ-2 (SARS-CoV-2) ವೈರಸ್‌ನ ಸ್ಪೈಕ್ ಪ್ರೋಟೀನ್‌ನೊಂದಿಗೆ ಜೋಡಿಸಲ್ಪಟ್ಟಿದೆ.