ಇಸ್ಲಾಮಾಬಾದ್:ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಭಾರತ ನಡೆಸಿದ ದಾಳಿಯನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಖಂಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಇಮ್ರಾನ್, ಗಡಿ ನಿಯಂತ್ರಣ ರೇಖೆ ಬಳಿ ಭಾರತ ಅಮಾಯಕರ ಮೇಲೆ ನಡೆಸಿದ ದಾಳಿಯನ್ನು ನಾನು ಖಂಡಿಸುತ್ತೇನೆ. ಅಲ್ಲದೆ, ಕ್ಲಸ್ಟರ್ ಬಾಂಬ್ ಬಳಸಿರುವುದು ಮಾನವೀಯ ಕಾನೂನನ್ನು ಮೀರಿದ್ದು. ಈ ಮೂಲಕ 1983ರ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ಬಳಕೆ ನಿಯಂತ್ರಣದ ಅಂತಾರಾಷ್ಟ್ರೀಯ ಕಾನೂನನ್ನೂ ಉಲ್ಲಂಘಿಸಿದೆ. ಅಂತಾರಾಷ್ಟ್ರೀಯ ಶಾಂತಿ ಹಾಗೂ ಭದ್ರತೆಗೆ ಧಕ್ಕೆ ಆಗುತ್ತಿರುವುದನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಗಮನಿಸಬೇಕು ಎಂದಿದ್ದಾರೆ.
ಆಕ್ರಮಿತ ಕಾಶ್ಮೀರದಲ್ಲಿರುವ ಜನರು ಅನುಭವಿಸುತ್ತಿರುವ ನೋವಿಗೆ ಅಂತ್ಯ ಹಾಡಬೇಕಿದೆ. ಅವರ ಹಕ್ಕುಗಳನ್ನು ಚಲಾಯಿಸುವ ಅವಕಾಶ ಸಿಗಬೇಕು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ದೇಶಗಳ ನಡುವೆ ಮಧ್ಯಸ್ಥಿಕೆ ವಹಿಸಬೇಕಿರುವುದು ಈ ಸಂದರ್ಭದಲ್ಲಿ ಅನಿವಾರ್ಯ ಎಂದೂ ಹೇಳಿದ್ದಾರೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗಡಿಯಲ್ಲಿ ಉಭಯ ದೇಶಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನದ 7 ಬ್ಯಾಟ್ ಯೋಧರನ್ನು ಭಾರತದ ಹೊಡೆದುರುಳಿಸಿದ ಬಳಿಕ ಇಮ್ರಾನ್ ಟ್ವೀಟ್ ಮಾಡಿದ್ದಾರೆ.
ಗಡಿಯಲ್ಲಿ ಭಾರತ ಬಾಂಬ್ ದಾಳಿ ಮಾಡಿದೆ ಎಂದು ನಿನ್ನೆ ಪಾಕಿಸ್ತಾನ ಆರೋಪಿಸಿತ್ತು. ಭಾರತ ಸಹ ನುಸುಳುಕೋರರನ್ನು ಹೊಡೆದುರುಳಿಸಿದ್ದಾಗಿ ಒಪ್ಪಿಕೊಂಡಿದ್ದು, ಶ್ವೇತಧ್ವಜ ಹಿಡಿದು, ಮೃತರ ದೇಹ ಕೊಡೊಯ್ಯಿರಿ ಎಂದು ಪಾಕಿಸ್ತಾನಕ್ಕೆ ದಿಟ್ಟತನದಿಂದ ಹೇಳಿತ್ತು.