ಪಾಕಿಸ್ತಾನ :ನನ್ನ ತೂಕ ಸಿಕ್ಕಾಪಟ್ಟೆ ಜಾಸ್ತಿಯಾಗಿ, ಸರ್, ಬದುಕಬೇಕಿದ್ರೇ ಚಿಕಿತ್ಸೆಗೊಳಗಾಗಲೇಬೇಕು. ಅದಕ್ಕಾಗಿ ತಾವು ಕೃಪೆ ಮಾಡಿ ವೈದ್ಯಕೀಯ ನೆರವು ಕಲ್ಪಿಸಬೇಕು ಅಂತಾ ಸೋಷಿಯಲ್ ಮೀಡಿಯಾದಲ್ಲಿ 3 ಕ್ವಿಂಟಲ್ ತೂಕದ ವ್ಯಕ್ತಿಯೊಬ್ಬ ಸೇನಾ ಮುಖ್ಯಸ್ಥರಿಗೆ ಮನವಿ ಮಾಡ್ಕೊಂಡಿದ್ದ. ಇದಕ್ಕೆ ಸ್ಪಂದಿಸಿ ಗೋಡೆ ಒಡೆದು ಹೊರ ತಂದ ಸೇನೆ, ಆಸ್ಪತ್ರೆಗೆ ಧಡೂತಿಯನ್ನ ಏರ್‌ಲಿಫ್ಟ್ ಮಾಡಿದೆ. ಪಾಕಿಸ್ತಾದಲ್ಲಿ ಈ ಅಚ್ಚರಿಯ ಘಟನೆ ನಡೆದಿದೆ.
3 ಕ್ವಿಂಟಲ್‌ನ ಧಡೂತಿ ಹೊರ ತರಲು ಮನೆ ಗೋಡೆ ಒಡೆದ ಸೈನಿಕರು ಸೇನಾ ಮುಖ್ಯಸ್ಥರೇ ಮನವಿಗೆ ಸ್ಪಂದಿಸಿ ವೈದ್ಯಕೀಯ ನೆರವು ಕಲ್ಪಿಸಿದರು!
ನೂರ್ ಹಾಸನ್ ಎಂಬಾತನ ತೂಕ ಬರೋಬ್ಬರಿ 300 ಕೆಜಿ. ಪಾಕ್‌ನ ಪಂಜಾಬ್ ಪ್ರಾಂತ್ಯದ ಸೈದಿಕಾಬಾದ್ ಜಿಲ್ಲೆಯ ನಿವಾಸಿ. ನೂರ್, ವರ್ಷಗಳಿಂದ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದ. ಆದರೆ, ಮನೆಯಿಂದ ಹೊರಗೆ ಕರೆತರೋದೇ ದೊಡ್ಡ ಸವಾಲಿನ ಕೆಲಸವಾಗಿತ್ತು. ಬಾಗಿಲಿಗಿಂತಲೂ ನೂರ್ ಆಗಲವಾಗಿದ್ದ. ತನ್ನ ಅತೀ ತೂಕದಿಂದಾಗಿ ಮನೆಯಿಂದ ಹೊರಗೆ ಬರಲಾಗ್ತಿಲ್ಲ. ಚಿಕಿತ್ಸೆ ಪಡೆಯಲಾಗುತ್ತಿಲ್ಲ. ಹಾಗಾಗಿ ತನಗೆ ವೈದ್ಯಕೀಯ ನೆರವು ನೀಡಲು ಸೋಷಿಯಲ್ ಮೀಡಿಯಾ ಮೂಲಕ ಸೇನಾ ಮುಖ್ಯಸ್ಥರಿಗೆ ನೂರ್ ಹಾಸನ್ ಮನವಿ ಮಾಡಿದ್ದ. ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಜ್ವಾ, ವೈದ್ಯಕೀಯ ನೆರವು ಕಲ್ಪಿಸಿದರು. ಮನೆ ಗೋಡೆ ಒಡೆದು ನೂರ್ ಹಾಸನ್‌ರನ್ನ ಹೊರಗೆ ಕರೆತರಲಾಯಿತು. 3 ಕ್ವಿಂಟಲ್ ತೂಗುವ ಈತನನ್ನ ಆ್ಯಂಬುಲೆನ್ಸ್‌ನಲ್ಲೂ ಕರೆದೊಯ್ಯಲು ಸಹ ಸಾಧ್ಯವಾಗಲಿಲ್ಲ. ಅಸಲಿಗೆ ಅದರಲ್ಲಿ ಈತ ಹಿಡಿಸಲೂ ಇಲ್ಲ. ಕೊನೆಗೆ ಸೇನಾ ಹೆಲಿಕಾಪ್ಟರ್ ಮೂಲಕ ಈತನನ್ನ ಲಾಹೋರ್‌ನ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಲಾಯಿತು.
ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಜ್ವಾ ಸದ್ಯ ಪಾಕಿಸ್ತಾನದಲ್ಲೀಗ ನೂರ್ ಹಾಸನ್ ಅತೀ ತೂಕದ ವ್ಯಕ್ತಿಯಂತೆ!
ಮೊದಲು ಸೇನಾ ಆಸ್ಪತ್ರೆಯಲ್ಲೇ ಪ್ರಾಥಮಿಕ ಪರೀಕ್ಷೆಗೊಳಪಡಿಸಲಾಯಿತು. ಆ ಬಳಿಕ ಅಲ್ಲಿಂದ ಶಾಲಮಾರ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಲ್ಯಾಪ್ರೋಸ್ಕೋಪಿಯ ಶಸ್ತ್ರಚಿಕಿತ್ಸೆಗೊಳಪಡಲಿದ್ದಾನೆ ನೂರ್. ಪಾಕಿಸ್ತಾನದಲ್ಲಿಯೇ ನೂರ್ ಅತಿ ತೂಕದ ವ್ಯಕ್ತಿ ಅಂತಾ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಈ ಮೊದಲು ಪಾಕ್‌ನಲ್ಲಿ 360 ಕೆಜಿ ತೂಕದ ವ್ಯಕ್ತಿಯಿದ್ದ. ಆದರೆ, 2017ರಲ್ಲಿ ಚಿಕಿತ್ಸೆ ಬಳಿಕ ಆತ ಈಗ 200 ಕೆಜಿಗಿಳಿದಿದ್ದಾನೆ. ಪಾಕ್‌ನ ಎಂಡೋಕ್ರೈನ್ ಸೋಸೈಟಿ ವರದಿ ಅನುಸಾರ ಆ ದೇಶದ ಜನಸಂಖ್ಯೆಯಲ್ಲಿ ಶೇ. 29ರಷ್ಟು ಮಂದಿ ಅತೀ ತೂಕ ಮತ್ತು ಶೇ.51ರಷ್ಟು ಜನ ಬೊಜ್ಜಿನಿಂದ ಬಳಲುತ್ತಿದ್ದಾರಂತೆ.