ಕಾಬೂಲ್:ಅಫ್ಘಾನಿಸ್ತಾನದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರುವ ತಾಲಿಬಾನ್ ಈಗಾಗಲೇ ನೂತನ ಸರ್ಕಾರ ರಚನೆ ಮಾಡಿದೆ. ಸಚಿವ ಸಂಪುಟವೂ ವಿಸ್ತರಣೆಯಾಗಿದೆ. ಪ್ರಮುಖವಾಗಿ ಅಫ್ಘಾನಿಸ್ತಾನದ ಸೆಂಟ್ರಲ್ ಬ್ಯಾಂಕ್ ಹಂಗಾಮಿ ಮುಖ್ಯಸ್ಥರನ್ನಾಗಿ ತಾಲಿಬಾನ್ ನಾಯಕ ಮೊಹಮ್ಮದ್ ಇದ್ರೀಸ್ ಎಂಬುವವರನ್ನು ನೇಮಕ ಮಾಡಲಾಗಿದೆ. ಅವರ ಇತ್ತೀಚಿನ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅಫ್ಘಾನಿಸ್ತಾನದ ಸೆಂಟ್ರಲ್ ಬ್ಯಾಂಕ್ ಬ್ಯಾಂಕ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿರುವ ತಾಲಿಬಾನ್ ನಾಯಕ ಮೊಹಮ್ಮದ್ ಲ್ಯಾಪ್ಟಾಪ್ ಜೊತೆ AK 47 ಗನ್ ಸಹ ಇಟ್ಟುಕೊಂಡಿದ್ದಾರೆ. ಇದರ ಫೋಟೋ ಹೆಚ್ಚು ವೈರಲ್ ಆಗುತ್ತಿದ್ದು, ಗನ್ ಇಟ್ಟುಕೊಂಡು ವ್ಯವಹಾರ ನಡೆಸಲು ಸಾಧ್ಯವೇ? ಎಂಬ ತರಹೇವಾರಿ ಪ್ರಶ್ನೆಗಳು ಕೇಳಿ ಬರಲು ಶುರುವಾಗಿವೆ.
ಇದನ್ನೂ ಓದಿ: ಅನಾರೋಗ್ಯಪೀಡಿತ ಪತ್ನಿಯನ್ನು ಹೆಗಲ ಮೇಲೆ ಹೊತ್ತು ಸಾಗಿ ಕೊನೆಗೆ ಕಣ್ಣೀರು ಹಾಕಿದ ವೃದ್ಧ ಪತಿ
ತಾಲಿಬಾನ್ ವಕ್ತಾರನಾಗಿದ್ದ ಮೊಹಮ್ಮದ್ ಇದ್ರೀಸ್ ಇದೀಗ ಅಲ್ಲಿನ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥನ್ನಾಗಿ ನೇಮಕಗೊಂಡಿದ್ದು, ಈ ಹಿಂದೆ ತಾಲಿಬಾನ್ ಆರ್ಥಿಕ ಸಲಹಾ ಸಮಿತಿಯ ಸದಸ್ಯರು ಕೂಡ ಆಗಿದ್ದರು ಎಂದು ತಿಳಿದು ಬಂದಿದೆ. ಮೊಹಮ್ಮದ್ ಅವರ ಶೈಕ್ಷಣಿಕ ಅರ್ಹತೆ, ವೃತ್ತಿಪರ ಅರ್ಹತೆ ಮತ್ತಿತರ ಮಾಹಿತಿ ಇದುವರೆಗೂ ತಿಳಿದುಬಂದಿಲ್ಲ. ಆದರೆ ಕಳೆದ 20 ವರ್ಷಗಳಿಂದ ತಾಲಿಬಾನ್ ಆರ್ಥಿಕ ಸಮಿತಿಯಲ್ಲಿದ್ದರು ಎನ್ನಲಾಗಿದೆ.
ಅಫ್ಘಾನಿಸ್ತಾನದಲ್ಲಿ ಹೊಸದಾಗಿ ಜಾರಿಗೊಂಡಿರುವ ತಾಲಿಬಾನ್ ಸರ್ಕಾರ ವಿಚಿತ್ರ ಕಾಯ್ದೆ ಜಾರಿಗೆ ತರುತ್ತಿದ್ದು, ಅಲ್ಲಿನ ಮಹಿಳೆಯರಿಗೆ ಸಂಪೂರ್ಣವಾಗಿ ನಿರ್ಬಂಧ ವಿಧಿಸಲಾಗಿದೆ. ಜತೆಗೆ ಯಾವುದೇ ಕ್ರೀಡೆಗಳಲ್ಲಿ ಭಾಗಿಯಾಗದಂತೆ ಕಟ್ಟಪ್ಪಣೆ ಹೊರಡಿಸಲಾಗಿದೆ.