ಕಠ್ಮಂಡು(ನೇಪಾಳ) : ಭಾರತದ ಭೂ ಪ್ರದೇಶ ಒಳಗೊಂಡಿರುವ ನೇಪಾಳದ ರಾಜಕೀಯ ಮತ್ತು ಆಡಳಿತಾತ್ಮಕ ನಕ್ಷೆಯ ತಿದ್ದುಪಡಿ ಮಸೂದೆಯು ಸಂಸತ್ತಿನ ಕೆಳಮನೆಯಲ್ಲಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಅಂಗೀಕಾರಗೊಂಡಿದೆ.
ನೂತನ ನಕ್ಷೆ ಅಂಗೀಕರಿಸಿದ ನೇಪಾಳದ ಸಂಸತ್ತು ಸಂವಿಧಾನದಲ್ಲಿ ಪರಿಚ್ಛೇದ 3 (ಕೋಟ್ ಆಫ್ ಆರ್ಮ್ಸ್) ರಲ್ಲಿ ನೂತನ ನಕ್ಷೆಯನ್ನು ಸೇರಿಸುವ (ಸಂವಿಧಾನ ಎರಡನೇ ತಿದ್ದುಪಡಿ 2077) ಮಸೂದೆಯನ್ನು ಶನಿವಾರ ನಡೆದ ಮತದಾನದ ಮೂಲಕ ಅನುಮೋದಿಸಲಾಗಿದೆ.
ಸುಮಾರು ಐದು ಗಂಟೆಗಳ ಚರ್ಚೆಯ ಬಳಿಕ ಪ್ರತಿನಿಧಿ ಸಭೆಯ ಸದಸ್ಯರು ತಿದ್ದುಪಡಿ ಮಸೂದೆಗೆ ಮತ ಚಲಾಯಿಸಿದರು. ಈ ವೇಳೆ ಚರ್ಚೆ ನಡೆಯುತ್ತಿದ್ದಾಗ ಕೆಲ ಸಂಸದರು ಈ ಸಮಸ್ಯೆಯನ್ನು ಬಗೆಹರಿಸಲು ಭಾರತದೊಂದಿಗೆ ಮಾತುಕತೆ ನಡೆಸಬೇಕೆಂದು ತಿಳಿಸಿದರು.
ಮಾಜಿ ಪ್ರಧಾನಿ ಮತ್ತು ಆಡಳಿತಾರೂಢ ನೇಪಾಳ ಕಮ್ಯೂನಿಸ್ಟ್ ಪಕ್ಷದ ಅಧ್ಯಕ್ಷ ಪುಷ್ಪಾ ಕಮಲ್ ದಹಲ್, ನಾವು ಗಡಿ ಸಮಸ್ಯೆಯನ್ನು ಮಾತುಕತೆ ಮತ್ತು ರಾಜತಾಂತ್ರಿಕ ಪ್ರಯತ್ನಗಳ ಮೂಲಕ ಪರಿಹರಿಸುತ್ತೇವೆ ಎಂಬ ನಿರ್ಣಯವನ್ನು ಮಾಡಿದ್ದೇವೆ. ಭಾರತದೊಂದಿಗೆ ನಮಗೆ ದ್ವೇಷ ಇಲ್ಲ, ಎಲ್ಲಾ ಪಕ್ಷಗಳು ಈ ಬಗ್ಗೆ ಗಂಭೀರವಾಗಿರಬೇಕು ಎಂದು ಕಿವಿಮಾತು ಹೇಳಿದರು.