ಕಾಬೂಲ್ (ಅಫ್ಘಾನಿಸ್ತಾನ): ಕಾಬೂಲ್ ವಿಮಾನ ನಿಲ್ದಾಣದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದ ಕೇವಲ ಮೂರು ದಿನಗಳಲ್ಲೇ ಅಫ್ಘಾನಿಸ್ತಾನ ರಾಜಧಾನಿಯಲ್ಲಿ ಈಗ ಮತ್ತೊಂದು ಬೃಹತ್ ಸ್ಫೋಟ ಸಂಭವಿಸಿದೆ. ಐಸಿಸ್-ಕೆ ಗುರಿಯಾಗಿಸಿ ಅಮೆರಿಕದ ಸೇನಾ ಪಡೆಗಳು ಕಾಬೂಲ್‌ನಲ್ಲಿ ಮಾನವ ರಹಿತ ವೈಮಾನಿಕ ದಾಳಿ ನಡೆಸಿವೆ.
ಏರ್ಪೋರ್ಟ್ ಸಮೀಪ ರಾಕೆಟ್ ದಾಳಿ ನಡೆಸಲಾಗಿದ್ದು, ಘಟನೆಯಲ್ಲಿ ಮಗುವೊಂದು ಸಾವನ್ನಪ್ಪಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೃಶ್ಯಾವಳಿಗಳು ಹಾಗೂ ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಕಾಬೂಲ್ ಏರ್ಪೋರ್ಟ್ ಸಮೀಪ ಮನೆಯೊಂದರ ಮೇಲೆ ರಾಕೆಟ್ ಅಪ್ಪಳಿಸಿದೆ ಎಂದು ಟೋಲೋ ನ್ಯೂಸ್ ತಿಳಿಸಿದೆ.
ಐಸಿಸ್ ಮೇಲೆ ಯುಎಸ್ ದಾಳಿ:
ಇದರ ಬೆನ್ನಲ್ಲೇ ಕಾಬೂಲ್‌ನಲ್ಲಿ ಶಂಕಿತ ISIS-K ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ಅಮೆರಿಕ ಮಿಲಿಟರಿ ದಾಳಿ ನಡೆಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಹಮೀದ್ ಕರ್ಜಾಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಐಸಿಸ್-ಕೆ ಗುರಿಯಾಗಿಸಿ ಅಮೆರಿಕದ ಸೇನಾ ಪಡೆಗಳು ಇಂದು ಕಾಬೂಲ್‌ನಲ್ಲಿ ಮಾನವ ರಹಿತ ವೈಮಾನಿಕ ದಾಳಿ ನಡೆಸಿವೆ. ಈ ದಾಳಿಯಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ವಕ್ತಾರ ಬಿಲ್ ಅರ್ಬನ್ ತಿಳಿಸಿದ್ದಾರೆ.
ಅಲ್ಲದೆ, ವಾಹನದಲ್ಲಿ ಗಣನೀಯ ಸ್ಫೋಟಕಗಳು ಇದ್ದುದರಿಂದ ನಾಗರಿಕ ಸಾವು ನೋವುಗಳು ಕೂಡ ಸಂಭವಿಸಿವೆ, ಸಾವುನೋವುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ ಎಂದೂ ತಿಳಿಸಿದ್ದಾರೆ.
ಇದನ್ನೂ ಓದಿ: ಕಾಬೂಲ್ ಏರ್ಪೋರ್ಟ್ನಲ್ಲಿ 24-36 ಗಂಟೆಯಲ್ಲಿ ಮತ್ತೊಂದು ಉಗ್ರ ದಾಳಿ: ಬೈಡನ್ ಎಚ್ಚರಿಕೆ
ಗುರುವಾರ ಕಾಬೂಲ್ ಏರ್ಪೋರ್ಟ್ ಬಳಿ ನಡೆದಿದ್ದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಅಮೆರಿಕದ 13 ಸೈನಿಕರು ಸೇರಿದಂತೆ ಸುಮಾರು 200 ಮಂದಿ ಮೃತಪಟ್ಟಿದ್ದರು. ದಾಳಿಯ ಹೊಣೆಯನ್ನು ಉಗ್ರ ಸಂಘಟನೆ ಐಸಿಸ್-ಕೆ ಒಪ್ಪಿಕೊಂಡಿತ್ತು. ಮುಂದಿನ 24-36 ಗಂಟೆಗಳಲ್ಲಿ ಮತ್ತೊಂದು ಭಯೋತ್ಪಾದಕ ದಾಳಿ ಸಂಭವಿಸುವ ಸಾಧ್ಯತೆ ಹೆಚ್ಚಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆ ಕೂಡ ನೀಡಿದ್ದರು.