ಕೊಲಂಬೋ:ಕೆಲವೇ ದಿನಗಳ ಹಿಂದಷ್ಟೇ ತಾನು ರಾಜಕಾರಣಿಯಲ್ಲ ಹಾಗೂ ರಾಜಕೀಯಕ್ಕೆ ಇಳಿಯುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದಿದ್ದ ಗೊಟಬಯ ರಾಜಪಕ್ಸ ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ದ್ವೀಪರಾಷ್ಟ್ರದ 7ನೇ ಅಧ್ಯಕ್ಷರಾಗಿ ಗದ್ದುಗೆ ಏರಿದ್ದಾರೆ. ರಾಜಪಕ್ಸ ಕುಟುಂಬ ಮತ್ತೆ ಅಧಿಕಾರಕ್ಕೇರಿದ್ದರಿಂದ ತಮ್ಮ ಮೂಲಭೂತ ಹಕ್ಕುಗಳನ್ನು ಕಳೆದುಕೊಳ್ಳುವ ಭೀತಿ ಮುಸ್ಲಿಂ ಮತ್ತು ತಮಿಳರಲ್ಲಿ ಮೂಡಿದೆ.
ನವೆಂಬರ್ 16ರಂದು ನಡೆದ ಚುನಾವಣೆಯಲ್ಲಿ ಶೇ.52ರಷ್ಟು ಮತಗಳನ್ನು ಪಡೆದು ಅಧ್ಯಕ್ಷ ಹುದ್ದೆಗೇರಿದ ರಾಜಪಕ್ಸ, ಲಂಕೆಯ ಅಧ್ಯಕ್ಷ ಗಾದಿಗೇರಿದ ಮೊದಲ ನಿವೃತ್ತ ಸೇನಾಧಿಕಾರಿ ಎಂಬ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ. 2019 ಈಸ್ಟರ್‌ನಲ್ಲಿ ಸರಣಿ ಬಾಂಬ್ ದಾಳಿ ನಡೆದಿದ್ದರಿಂದ ದೇಶದಲ್ಲಿ ಅಭದ್ರತೆಯ ಭಾವವನ್ನು ಸಿಂಹಳೀಯರು ಹೊಂದಿದ್ದಾರೆ, ರಾಜಪಕ್ಸ ಕುಟುಂಬ ಮತ್ತೆ ಅಧಿಕಾರಕ್ಕೇರಿದ್ದರಿಂದ ಮುಸ್ಲಿಂ ಮತ್ತು ತಮಿಳು ಅಲ್ಪಸಂಖ್ಯಾತರು ತಮ್ಮ ಮೂಲಭೂತ ಹಕ್ಕುಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಮುಸ್ಲಿಂರು ಮತ್ತು ತಮಿಳು ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಈಶಾನ್ಯ ಜಿಲ್ಲೆಗಳಲ್ಲಿ ಆಡಳಿತಾರೂಢ ಪಕ್ಷದ ಅಭ್ಯರ್ಥಿ ಸಜಿತ್ ಪ್ರೇಮದಾಸ ಶೇ. 80ರಷ್ಟು ಮತಗಳನ್ನು ಪಡೆದಿದ್ದರು. ಆದರೆ, ಸಿಂಹಳೀಯರ ಮತಗಳೇ ಪ್ರಭಾವಿಯಾಗಿದ್ದರಿಂದ ಗೊಟಬಯ ಅಧಿಕಾರಕ್ಕೇರಿದ್ದಾರೆ. ಎಲ್‌ಟಿಟಿಇ ಸಮಸ್ಯೆಯನ್ನು ಕೊನೆಗೊಳಿಸುವಲ್ಲಿ ಅತ್ಯಂತ ಕಠಿಣ ನಿಲುವು ತಳೆದಿದ್ದಕ್ಕೆ ಸಿಂಹಳೀಯ ಸಮುದಾಯವು ಗೊಟಬಯರನ್ನು ತಮ್ಮ ಹೀರೋ ಎಂಬಂತೆ ಪರಿಗಣಿಸಿದೆ. ಇದರೊಂದಿಗೆ 2005ರಿಂದ ಒಂದು ದಶಕದವರೆಗೆ ದೇಶವನ್ನು ಆಳಿದ್ದ ಮಹಿಂದ ರಾಜಪಕ್ಸ ಸೋದರ ಎಂಬುದು ಸಿಂಹಳೀಯರು ಅವರ ಪರ ವಹಿಸಲು ಕಾರಣವಾಯಿತು. ಈಸ್ಟರ್ ಸರಣಿ ಬಾಂಬ್ ದಾಳಿಯ ಸನ್ನಿವೇಶದಲ್ಲಿ ದೇಶವನ್ನು ರಕ್ಷಿಸಲು ಸಶಕ್ತ ನಾಯಕ ಗೊಟಾಬಯ ಎಂಬುದಾಗಿ ನಾಗರಿಕರು ಭಾವಿಸಿದ್ದಾರೆ. ಸಿಂಹಳ ಸಮುದಾಯವು ಅವರಿಗೆ ಮತ ನೀಡಿ ಗೆಲ್ಲಿಸಿದೆ. ರಾಷ್ಟ್ರ ಕಟ್ಟುವ ಕ್ರಿಯೆಯಲ್ಲಿ ಭಾಗವಹಿಸಿ ಎಂದು ಮುಸ್ಲಿಮರು ಹಾಗೂ ತಮಿಳರಿಗೆ ಅವರು ವಿನಂತಿಸಿಕೊಂಡಿದ್ದಾರೆ. ಚುನಾವಣೆ ಪ್ರಚಾರದ ವೇಳೆ ದೇಶದ ಭದ್ರತೆ ಮತ್ತು ಆರ್ಥಿಕ ಪುನಶ್ಚೇತನವೇ ಮಹತ್ವದ ಸಂಗತಿಯಾಗಿತ್ತು. ಹೀಗಾಗಿ, ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವುದು ಹೊಸ ಅಧ್ಯಕ್ಷರಿಗೆ ಸವಾಲಿನ ಕೆಲಸವೇ ಆಗಿದೆ. ರಾಜಪಕ್ಸ ಕುಟುಂಬವು ಚೀನಾ ಜೊತೆಗೆ ಉತ್ತಮ ಸಂಬಂಧ ಹೊಂದಿರುವುದು ಗೊತ್ತಿಲ್ಲದ ಸಂಗತಿಯೇನಲ್ಲ. ಹೀಗಾಗಿ ಶ್ರೀಲಂಕಾ ಜೊತೆಗೆ ಸ್ನೇಹ ಸಂಬಂಧ ಬೆಸೆಯುವಾಗ ಭಾರತವು ವಿಶೇಷ ಎಚ್ಚರಿಕೆ ವಹಿಸಬೇಕಾಗಿದೆ.
ಕಾವ್ಯಾತ್ಮಕವಾಗಿ ಭಾರತದ ಕಣ್ಣೀರ ಹನಿ ಎಂದೇ ಶ್ರೀಲಂಕಾವನ್ನು ಬಿಂಬಿಸಲಾಗುತ್ತದೆ. ಈ ಪುಟ್ಟ ದ್ವೀಪವು ಹಿಂದಿನಿಂದಲೂ ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಲೇ ಇದೆ. ತಮಿಳು ಟೈಗರ್‌ಗಳು ಆರಂಭಿಸಿದ ದಂಗೆ ದಶಕಗಳವರೆಗೆ ಇಡೀ ದೇಶವನ್ನು ಹಿಂಡಿ ಹಿಪ್ಪೆ ಮಾಡಿತು. ಎಲ್‌ಟಿಟಿಇ ಅನ್ನು ಹತ್ತಿಕ್ಕಿ 2010ರಲ್ಲಿ ಎರಡನೇ ಬಾರಿಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದ ಮಹಿಂದಾ ರಾಜಪಕ್ಸ ಎರಡು ಪ್ರಮುಖ ಕೆಲಸಗಳನ್ನು ಮಾಡಿದರು. ತನ್ನ ಅಧಿಕಾರವನ್ನು ರಕ್ಷಿಸಿಕೊಳ್ಳಲು ಸಂವಿಧಾನಕ್ಕೆ ತಿದ್ದುಪಡಿ ಮಾಡಿದರು. ಚೀನಾದ ಹೂಡಿಕೆಗಳಿಗೆ ದೇಶದ ಬಾಗಿಲು ತೆರೆದರು ಮತ್ತು ಹಂಬಂತೋಟ ಬಂದರಿನಲ್ಲಿ ಚೀನಾದ ಸಬ್‌ಮರಿನ್‌ಗಳು ನಿಲ್ಲಲು ಅವಕಾಶ ಮಾಡಿಕೊಟ್ಟಿದ್ದರು.
ಗೆಲುವು ಸಾಧಿಸುವುದು ಖಚಿತ ಎಂದು ಭಾವಿಸಿ 2015ರಲ್ಲಿ ಚುನಾವಣೆ ಎದುರಿಸಿದರಾದರೂ, ಜನರು ಮೈತ್ರಿಪಾಲ ಸಿರಿಸೇನ ಪರವಾಗಿ ಮತ ಹಾಕಿದರು. ಪ್ರಧಾನಿ ರಾಣಿಲ್ ವಿಕ್ರಮಸಿಂಘೆ ಜೊತೆ ಕೈಜೋಡಿಸಿ ದೇಶವನ್ನು ಪ್ರಗತಿಯ ಕಡೆಗೆ ಸಾಗಿಸುತ್ತೇವೆ ಎಂದು ಮೈತ್ರಿಪಾಲ ಸಿರಿಸೇನ ಅವರ ಪಕ್ಷ ಹೇಳಿಕೊಂಡಿತಾದರೂ, 4 ವರ್ಷಗಳಲ್ಲೇ ಎರಡೂ ಪಕ್ಷಗಳು ದೂರವಾದವು. ಉಗ್ರರ ದಾಳಿಯ ನಡೆಯುವ ಸಾಧ್ಯತೆಯ ಬಗ್ಗೆ ಭಾರತದ ಗುಪ್ತಚರ ದಳಗಳು ಎಚ್ಚರಿಕೆ ನೀಡಿತ್ತಾದರೂ, ಆಡಳಿತ ಪಕ್ಷ ನಿದ್ರೆಯಲ್ಲಿತ್ತು. ಸಮಯಕ್ಕೆ ಸರಿಯಾಗಿ ಕ್ರಮ ತೆಗೆದುಕೊಳ್ಳಲಿಲ್ಲ. ಇದರ ಪರಿಣಾಮವಾಗಿ ಈಸ್ಟರ್ ವೇಳೆ ನಡೆದ ಬಾಂಬ್ ದಾಳಿಯಲ್ಲಿ 269 ಜನರು ಸಾವನ್ನಪ್ಪಿದರು. ದೇಶಕ್ಕೆ ಭದ್ರತೆ ಒದಗಿಸುವ ನಾಯಕನನ್ನು ಆಯ್ಕೆ ಮಾಡುವುದಕ್ಕಾಗಿಯೇ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲುವುದು ಗೊಟಬಯಗೆ ಕಷ್ಟದ್ದೇನೂ ಆಗಿರಲಿಲ್ಲ. ಮಹಿಂದಾಗಿಂತ ವಿಭಿನ್ನವಾದ ನಾಯಕತ್ವವನ್ನು ಗೊಟಬಯ ನೀಡುತ್ತಾರೆ ಎಂಬ ಯಾವ ನಿರೀಕ್ಷೆಯೂ ಇಲ್ಲ. ಅಷ್ಟೇ ಅಲ್ಲ, ಪ್ರಧಾನಿಯಾಗಿ ಮಹಿಂದಾರನ್ನು ಆಯ್ಕೆ ಮಾಡುವ ಕುರಿತಾದ ವರದಿಗಳು ಬರುತ್ತಿದ್ದು, ಇದು ಶ್ರೀಲಂಕಾದಲ್ಲಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಲಿದೆ.
ಎಲ್‌ಟಿಟಿಯನ್ನು ಅಮಾನವೀಯವಾಗಿ ಹತ್ತಿಕ್ಕಿದ ನಂತರ, ಮಹಿಂದಾ ಅಧಿಕಾರವಧಿಯಲ್ಲಿ ವ್ಯಕ್ತಿ ಸ್ವಾತಂತ್ರ್ಯ ಎಂಬುದೇ ಕಳೆದುಹೋಗಿತ್ತು. ಭ್ರಷ್ಟಾಚಾರ ಮತ್ತು ಅವ್ಯವಹಾರ ತಾರಕಕ್ಕೇರಿದ್ದವು. ಆದರೆ ಮಾನವಾಭಿವೃದ್ಧಿ ಸೂಚ್ಯಂಕ ಮತ್ತು ಪ್ರಗತಿ ಸೂಚ್ಯಂಕದಲ್ಲಿ ಏರಿಕೆಯ ಜೊತೆಗೆ ನಿರುದ್ಯೋಗ ದರ ಇಳಿಕೆಯಾಗಿತ್ತು. ಆದರೆ ರಾಜಕೀಯ ಸ್ಥಿರತೆಯಿಂದಾಗಿ ದೇಶ ಉತ್ತಮ ಪ್ರಗತಿಯನ್ನೇನೋ ಸಾಧಿಸಿತು. 2016ರಲ್ಲಿ ಜಿಡಿಪಿ ಶೇ. 4.5ರಷ್ಟಿತ್ತಾದರೂ, 2018ರಲ್ಲಿ ಶೇ. 2.7ಕ್ಕೆ ಇಳಿಕೆಯಾಗಿತು. ಇನ್ನು ಈ ವರ್ಷವಂತೂ ಶೇ. 1.5ಕ್ಕೆ ಇಳಿಕೆ ಕಂಡಿತು. ಈಸ್ಟರ್ ಸರಣಿ ದಾಳಿಯ ನಂತರ ಪ್ರವಾಸೋದ್ಯಮ ಕುಂಠಿತಗೊಂಡಿದ್ದು, 6950 ಕೋಟಿ ಡಾಲರ್ ಸಾಲವು ಇಡೀ ಜಿಡಿಪಿಯ ಶೇ. 78ರಷ್ಟನ್ನು ನುಂಗಿ ಹಾಕುತ್ತಿದೆ. ಇಡೀ ದೇಶ ಆರ್ಥಿಕ ಕುಸಿತದ ಅಂಚಿನಲ್ಲಿದೆ. ಅರ್ಧದಷ್ಟು ಬಾಹ್ಯ ಸಾಲವಿದ್ದು, ಚೀನಾದ ಸಾಲದ ಬಲೆಗೆ ಶ್ರೀಲಂಕಾ ಬಿದ್ದಿರುವುದು ಸರ್ವವಿದಿತ. ಭಾರತದ ಗಡಿಯಲ್ಲಿ ವ್ಯೂಹಾತ್ಮಕ ದಾಳಿ ನಡೆಸುತ್ತಿರುವ ಚೀನಾಗೆ ಗೊಟಾಬಾಯ ಗೆಲುವು ಖುಷಿ ತಂದಿರುವುದಂತೂ ಖಚಿತ.
ಭಾರತ-ಶ್ರೀಲಂಕಾ ದ್ವಿಪಕ್ಷೀಯ ಸಂಬಂಧವು ಹೊಸ ಹೊಳಹನ್ನು ಕಂಡುಕೊಳ್ಳಬೇಕಿದೆ. ತನ್ನ ಚುನಾವಣೆ ಪ್ರಚಾರದ ವೇಳೆ ಭಾರತದ ಜೊತೆಗೆ ಸಂಬಂಧ ಸುಧಾರಣೆಗೆ ಆದ್ಯತೆ ನೀಡುತ್ತೇನೆ ಎಂದು ಗೊಟಬಯ ಆಶ್ವಾಸನೆ ನೀಡಿದ್ದಾರೆ. ಹಳೆಯ ಘೋಷವಾಕ್ಯ 'ಭಾರತವು ನಮ್ಮ ಸಂಬಂಧಿ ಮತ್ತು ಚೀನಾ ವಿಶೇಷ ಸ್ನೇಹಿತ' ಎಂಬುದನ್ನು ಮತ್ತೆ ಹೊಸೆಯಲಾಗಿದೆ. ಹೀಗಾಗಿ ಚೀನಾಗೆ ಅವಕಾಶ ಕೊಡದಂತೆ ಶ್ರೀಲಂಕಾದ ಜೊತೆಗೆ ರಾಜತಾಂತ್ರಿಕ ಸಂಬಂಧವನ್ನು ರೂಪಿಸಲು ಮೋದಿ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ.