ಲಾಹೋರ್(ಪಾಕಿಸ್ತಾನ):ಅತ್ತ ತಾಲಿಬಾನ್ ಉಗ್ರರು ಅಟ್ಟಹಾಸ ಮೆರೆಯುತ್ತಿದ್ದಾರೆ. ಇತ್ತ ಪಾಕಿಸ್ತಾನದ ತೆಹ್ರೀಕ್-ಎ-ಲಬ್ಬೈಕ್ನ ಸದಸ್ಯರು ಮಂಗಳವಾರ ಲಾಹೋರ್‌ನಲ್ಲಿ ಮಹಾರಾಜ ರಂಜಿತ್ ಸಿಂಗ್ ಪ್ರತಿಮೆಯನ್ನು ಧ್ವಂಸಗೊಳಿಸಿ ವಿಧ್ವಂಸಕ ಕೃತ್ಯ ಎಸಗಿದ್ದಾರೆ.
ಪ್ರತಿಮೆ ಧ್ವಂಸಗೊಳಿಸಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಲಾಹೋರ್ ಕೋಟೆ ಸಂಕೀರ್ಣದಲ್ಲಿರುವ ಮಹಾರಾಜರ ಪ್ರತಿಮೆಯನ್ನು ಧ್ವಂಸಗೊಳಿಸಿರುವುದು ಇದು ಮೂರನೇ ಬಾರಿ. ಕೋಲ್ಡ್ ಕಂಚಿನಿಂದ ಮಾಡಿದ ಒಂಬತ್ತು ಅಡಿ ಈ ಪ್ರತಿಮೆಯನ್ನು ಲಾಹೋರ್ ಕೋಟೆಯಲ್ಲಿ 2019 ರ ಜೂನ್ನಲ್ಲಿ ಮಹಾರಾಜರ 180 ನೇ ಪುಣ್ಯತಿಥಿಯ ಅಂಗವಾಗಿ ಅನಾವರಣಗೊಳಿಸಲಾಯಿತು. ರಾಜ ಮಹಾರಾಜ ರಂಜಿತ್ ಸಿಂಗ್ ಕುದುರೆಯ ಮೇಲೆ ಕುಳಿತಿರುವ ಪ್ರತಿಮೆ ಇದಾಗಿದ್ದು , ಕೈಯಲ್ಲಿ ಖಡ್ಗ ಹಿಡಿದಿದ್ದು, ಸಿಖ್ ಉಡುಪು ಧರಿಸಿದ್ದಾರೆ.
ಕೈಯಲ್ಲಿ ಖಡ್ಗದೊಂದಿಗೆ ತನ್ನ ನೆಚ್ಚಿನ ಕುದುರೆ 'ಕಹರ್ ಬಹರ್ ' ಮೇಲೆ ಕುಳಿತಿರುವ ಸಿಖ್ ಆಡಳಿತಗಾರನ ಪ್ರತಿಮೆಯನ್ನು ಪೂರ್ಣಗೊಳಿಸಲು ಎಂಟು ತಿಂಗಳು ಬೇಕಾಯಿತು. ಈ ಕುದುರೆ ಬಾರಾಜ್ಕೈ ರಾಜವಂಶದ ಸ್ಥಾಪಕರಾದ ದೋಸ್ತ್ ಮುಹಮ್ಮದ್ ಖಾನ್ ಅವರ ಕೊಡುಗೆಯಾಗಿದೆ. ಸಿಖ್ ಸಾಮ್ರಾಜ್ಯದ ಮೊದಲ ಮಹಾರಾಜರಾಗಿದ್ದ ರಂಜಿತ್ ಸಿಂಗ್ ಸುಮಾರು 40 ವರ್ಷಗಳ ಕಾಲ ಪಂಜಾಬ್ ಅನ್ನು ಆಳಿದ್ದರು. ಅವರು 1839 ರಲ್ಲಿ ನಿಧನರಾದರು.
ಅನಾವರಣಗೊಂಡ ಕೇವಲ ಎರಡು ತಿಂಗಳಲ್ಲೇ ಪ್ರತಿಮೆಯನ್ನು ತೆಹ್ರೀಕ್-ಎ-ಲಬ್ಬೈಕ್ ನ ಇಬ್ಬರು ಸದಸ್ಯರು ಧ್ವಂಸಗೊಳಿಸಿದ್ದಾರೆ. ಈ ಕೃತ್ಯ ಎಸಗಿದ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಅಂಗವಿಕಲನ ಸೋಗಿನಲ್ಲಿ ಓರ್ವ ವ್ಯಕ್ತಿ ಮತ್ತು ಆತನ ಸಹಾಯಕ ಕೋಟೆಯನ್ನು ಪ್ರವೇಶಿಸಿದ್ದರು. ಅಂಗವಿಕಲನ ರೀತಿ ನಟಿಸುತ್ತಿದ್ದ ವ್ಯಕ್ತಿ ಪ್ರತಿಮೆಗೆ ರಾಡ್ನಿಂದ ಹೊಡೆದ. ಈ ವೇಳೆ ಎರಡನೇ ವ್ಯಕ್ತಿ ಆತನಿಗೆ ಸಹಾಯ ಮಾಡಿದ. ದಾಳಿಯಲ್ಲಿ ಪ್ರತಿಮೆಯ ಒಂದು ತೋಳು ಮತ್ತು ಇತರ ಭಾಗಗಳು ಮುರಿದು ಬಿದ್ದಿವೆ.
ಮುಸ್ಲಿಂ ದೇಶದಲ್ಲಿ ಸಿಖ್ ಆಡಳಿತಗಾರನ ಪ್ರತಿಮೆಯನ್ನು ಸ್ಥಾಪಿಸುವುದು ತಮ್ಮ ಧರ್ಮಕ್ಕೆ ವಿರುದ್ಧವಾಗಿದೆ ಎಂದು ಈ ಆರೋಪಿಗಳು ಭಾವಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.