ಕಾಬೂಲ್ (ಅಫ್ಘಾನಿಸ್ತಾನ): ಪ್ರಸ್ತುತ ತಾಲಿಬಾನ್ ಆಡಳಿತದಲ್ಲಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ನಿಮ್ಮ ಸಮವಸ್ತ್ರ, ಕ್ರೀಡಾ ಸಾಮಗ್ರಿಗಳ ಕಿಟ್ಗಳನ್ನ ಸುಟ್ಟುಹಾಕಿ. ಫೋಟೋಗಳನ್ನು, ಸಾಮಾಜಿಕ ಜಾಲತಾಣಗಳ ಖಾತೆಯನ್ನು ಡಿಲೀಟ್ ಮಾಡಿ, ನಿಮ್ಮ ಗುರುತುಗಳನ್ನು ಅಳಿಸಿಹಾಕಿ ಎಂದು ಅಫ್ಘಾನಿಸ್ತಾನದ ಮಹಿಳಾ ಫುಟ್ಬಾಲ್ ತಂಡದ ಮಾಜಿ ನಾಯಕಿ ಖಾಲಿದಾ ಪೋಪಾಲ್ ಅವರು ಆಟಗಾರ್ತಿಯರಿಗೆ ಕರೆ ನೀಡಿದ್ದಾರೆ.
ಆಫ್ಘನ್ ಮಹಿಳಾ ಫುಟ್ಬಾಲ್ ಲೀಗ್‌ನ ಸಹ - ಸಂಸ್ಥಾಪಕಿ, ಮಹಿಳಾ ಪರ ಹೋರಾಟಗಾರ್ತಿಯೂ ಆಗಿರುವ ಖಾಲಿದಾ ಪೋಪಾಲ್ ಯಾವಾಗಲೂ ಮಹಿಳಾ ಸಬಲೀಕರಣಕ್ಕಾಗಿ ದನಿ ಎತ್ತುದ್ದಿದ್ದವರು, ಧೈರ್ಯದಿಂದ ಮುನ್ನಗ್ಗಲು ಪ್ರೋತ್ಸಾಹ-ಸ್ಫೂರ್ತಿ ನೀಡುತ್ತಿದ್ದವರು. ಆದರೆ, ಈಗ ಸಂದೇಶ ಮಾತ್ರ ವಿಭಿನ್ನವಾಗಿದೆ.
ಇದನ್ನೂ ಓದಿ: 'ಮಹಿಳೆಯರ ಹಿಂಸಿಸಿ, ದೇಹವನ್ನು ನಾಯಿಗೆ ಎಸೆಯುತ್ತಾರೆ': ಕಣ್ಣು ಕಳೆದುಕೊಂಡ ಮಹಿಳೆ ಹೇಳಿದ ತಾಲಿಬಾನಿಗಳ ಕ್ರೌರ್ಯದ ಕಥೆ
ಇಡೀ ಅಫ್ಘಾನಿಸ್ತಾನ ತಾಲಿಬಾನ್ ಪಾಲಾದ ಬಳಿಕ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಉಗ್ರರು ಮಹಿಳೆಯರನ್ನು ಕೊಂದಿದ್ದಾರೆ, ಅತ್ಯಾಚಾರ ಮಾಡಿದ್ದಾರೆ ಮತ್ತು ಅವರ ಮೇಲೆ ಕಲ್ಲೆಸೆದಿದ್ದಾರೆ. ಫುಟ್ಬಾಲ್ ಆಟಗಾರ್ತಿಯರೀಗ ತಮ್ಮ ಭವಿಷ್ಯದ ಬಗ್ಗೆ ಭಯಭೀತರಾಗಿದ್ದಾರೆ ಎಂದರು. ಅಲ್ಲದೇ ನಿಮ್ಮ ರಕ್ಷಣೆಗಾಗಿ ರಾಷ್ಟ್ರೀಯ ತಂಡದ ಸಮವಸ್ತ್ರವನ್ನು ಸುಟ್ಟುಹಾಕಿ ಎಂದು ಒತ್ತಾಯಿಸಿದ್ದಾರೆ.
ನಮ್ಮ ಎದೆಯ ಮೇಲೆ ದೇಶವನ್ನು ಪ್ರತಿನಿಧಿಸುವ ಬ್ಯಾಡ್ಜ್ ತೊಟ್ಟು, ದೇಶಕ್ಕಾಗಿ ಆಡುವುದಕ್ಕೆ ನಮಗೆಷ್ಟು ಹೆಮ್ಮೆ ಆಗುತ್ತದೆ. ತಾಲಿಬಾನ್ ವಿರುದ್ಧ ಬಲವಾಗಿ ನಿಂತು 'ಮಹಿಳೆಯರು ಬಲಿಷ್ಠರು' ಎಂಬುದನ್ನ ತೋರಿಸಿದ್ದೆವು. ಆದರೆ, ಈಗ ಒಬ್ಬ ಹೋರಾಟಗಾರ್ತಿಯಾಗಿ ಕ್ರೀಡಾಪಟುಗಳ ಗುರುತನ್ನೇ ತೆಗೆದು ಹಾಕಿ ಎಂದು ಹೇಳುವುದಕ್ಕೆ ನನಗೆ ತುಂಬಾ ನೋವಾಗುತ್ತಿದೆ ಎಂದು ಖಾಲಿದಾ ಪೋಪಾಲ್ ಭಾವುಕರಾಗಿದ್ದಾರೆ.