ಸಿಡ್ನಿ:ಕೋವಿಡ್-19 ಪ್ರಕರಣಗಳ ಉಲ್ಬಣದ ವಿರುದ್ಧ ಹೋರಾಡುತ್ತಿರುವ ದೇಶಕ್ಕೆ ತಕ್ಷಣದ ಬೆಂಬಲ ಪ್ಯಾಕೇಜಿನ ಭಾಗವಾಗಿ ಆಸ್ಟ್ರೇಲಿಯಾ ಆಮ್ಲಜನಕ, ವೆಂಟಿಲೇಟರ್ ಮತ್ತು ವೈಯಕ್ತಿಕ ರಕ್ಷಣಾ ಸಾಧನಗಳನ್ನು ಭಾರತಕ್ಕೆ ಕಳುಹಿಸುತ್ತದೆ ಎಂದು ಆರೋಗ್ಯ ಸಚಿವ ಗ್ರೆಗ್ ಹಂಟ್ ತಿಳಿಸಿದ್ದಾರೆ.
ಫೆಡರಲ್ ಸರ್ಕಾರವು ಸಹಾಯಕ್ಕಾಗಿ ಏನು ಕಳುಹಿಸಬಹುದೆಂದು ಪರಿಗಣಿಸುವ ಪ್ರಕ್ರಿಯೆಯಲ್ಲಿದೆ ಎಂದು ಆಸ್ಟ್ರೇಲಿಯಾದ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ ಸುದ್ದಿ ಚಾನೆಲ್ ಹಂಟ್ ಅವರ ಹೇಳಿಕೆ ಉಲ್ಲೇಖಿಸಿದೆ.
ಭಾರತ ಅಕ್ಷರಶಃ ಆಮ್ಲಜನಕಕ್ಕಾಗಿ ಉಸಿರಾಡುತ್ತಿದೆ. ನಾವು ರಾಷ್ಟ್ರೀಯ ವೈದ್ಯಕೀಯ ದಾಸ್ತಾನು ಸಂಗ್ರಹಕ್ಕೆ ನೆರವಾಗಲಿದ್ದೇವೆ. ಅವರು (ಭಾರತ) ಆಮ್ಲಜನಕದ ಭೌತಿಕ ಪೂರೈಕೆಗೆ ಸಂಬಂಧದ ನೆರವಿಗಾಗಿ ಎದುರು ನೋಡುತ್ತಿದೆ ಎಂದರು.
ಫೆಡರಲ್ ಸರ್ಕಾರವು ಮಂಗಳವಾರ ಘೋಷಿಸಲಿರುವ ತಕ್ಷಣದ ಬೆಂಬಲ ಪ್ಯಾಕೇಜಿನ ಭಾಗವಾಗಿ ಭಾರತಕ್ಕೆ ಆಮ್ಲಜನಕ, ವೆಂಟಿಲೇಟರ್ ಮತ್ತು ವೈಯಕ್ತಿಕ ರಕ್ಷಣಾ ಸಾಧನಗಳನ್ನು ಕಳುಹಿಸುವುದನ್ನು ದೃಢಪಡಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ, ಆಸ್ಟ್ರೇಲಿಯಾ ಲಸಿಕೆಗಳನ್ನು ಕಳುಹಿಸುತ್ತಿಲ್ಲ ಎಂದಿದೆ.
ಭಾರತಕ್ಕೆ ಯಾವುದೇ ಸಹಾಯದ ಬಗ್ಗೆ ಚರ್ಚಿಸಲು ಕ್ಯಾಬಿನೆಟ್‌ನ ರಾಷ್ಟ್ರೀಯ ಭದ್ರತಾ ಸಮಿತಿ ಮಂಗಳವಾರ ಸಭೆ ಸೇರಲಿದೆ. ಆಸ್ಟ್ರೇಲಿಯಾಕ್ಕೆ ಹರಡುವ ಸೋಂಕುಗಳ ಅಪಾಯವನ್ನು ಕಡಿಮೆ ಮಾಡಲು ತೆಗೆದುಕೊಳ್ಳಬೇಕಾದ ಯಾವುದೇ ಹೆಚ್ಚುವರಿ ಕ್ರಮಗಳ ಬಗ್ಗೆಯೂ ಸಂವಾದ ನಡೆಯಲಿದೆ.
ದೇಶದಲ್ಲಿ ಭಾರಿ ಪ್ರಮಾಣದ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಭಾರತದಿಂದ ಎಲ್ಲಾ ವಿಮಾನಗಳನ್ನು ನಿಷೇಧಿಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿತು. ಭಾರತದಿಂದ ಹೊರಹೋಗುವ ಎಲ್ಲಾ ವಾಪಸಾತಿ ವಿಮಾನಗಳನ್ನು ತಾತ್ಕಾಲಿಕವಾಗಿ ನಿಲ್ಲಿಸುವ ಬಗ್ಗೆ ಕ್ಯಾಬಿನೆಟ್ ಸಭೆ ಚರ್ಚಿಸಲಿದೆ.