ಬೀಜಿಂಗ್:ದಿನೇ ದಿನೆ ಹೆಚ್ಚಾಗುತ್ತಿರುವ ಕೋವಿಡ್-19 ಪ್ರಕರಣಗಳ ನಿಯಂತ್ರಣಕ್ಕಾಗಿ ನೆರವಾಗಲು ಚೀನಾ ಈಗಾಗಲೇ ಪಾಕಿಸ್ತಾನಕ್ಕೆ ಸಾಕಷ್ಟು ವೈದ್ಯಕೀಯ ಸಿಬ್ಬಂದಿ ಹಾಗೂ ಚಿಕಿತ್ಸಾ ಸಲಕರಣೆಗಳನ್ನು ರವಾನೆ ಮಾಡಿದೆ. ಈಗ ತನ್ನ ಆಪ್ತಮಿತ್ರನಿಗೆ ಸಹಾಯ ಮಾಡಲು ಚೀನಾ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಪಾಕಿಸ್ತಾನದಲ್ಲಿ ಕೊರೊನಾ ಪೀಡಿತರ ಚಿಕಿತ್ಸೆಗಾಗಿ ತಾತ್ಕಾಲಿಕ ಆಸ್ಪತ್ರೆಗಳನ್ನು (makeshift hospital) ನಿರ್ಮಿಸಿ ಕೊಡಲು ಮುಂದಾಗಿದೆ.
"ಪಾಕಿಸ್ತಾನದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ಅವರ ಎಲ್ಲ ಕಷ್ಟಗಳಿಗೂ ನಾವು ಸ್ಪಂದಿಸಲಿದ್ದೇವೆ. ಟೆಸ್ಟಿಂಗ್ ಕಿಟ್ಗಳು, ರಕ್ಷಣಾ ಉಡುಪುಗಳು, ವೆಂಟಿಲೇಟರ್ಗಳನ್ನು ಈಗಾಗಲೇ ಪಾಕಿಸ್ತಾನಕ್ಕೆ ಕಳುಹಿಸಿದ್ದೇವೆ. ಕಳೆದ ವಾರವೇ ಪಾಕಿಸ್ತಾನದಲ್ಲಿ ತಾತ್ಕಾಲಿಕ ಆಸ್ಪತ್ರೆಯ ಕಟ್ಟಡ ಕಾಮಗಾರಿಯನ್ನು ನಾವು ಆರಂಭಿಸಿದ್ದೇವೆ." ಎಂದು ಚೀನಾ ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರೆ ಹುವಾ ಚುನಿಯಿಂಗ್ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದ್ದಾರೆ.