ಕಾಠ್ಮಂಡು (ನೇಪಾಳ):ಚೀನಾ ಈಗ ಭಾರತದ ಗಡಿ ಮಾತ್ರವಲ್ಲ, ನೆರೆಯ ರಾಷ್ಟ್ರ ನೇಪಾಳದ ಗಡಿ ಭಾಗದ ಗ್ರಾಮವೊಂದನ್ನೂ ಆಕ್ರಮಿಸಿಕೊಂಡಿದೆ. ಈ ಪ್ರದೇಶದ ಸ್ವಾಧೀನವನ್ನು ನ್ಯಾಯಸಮ್ಮತಗೊಳಿಸಲು ನೇಪಾಳ ಹಾಕಿದ್ದ ಗಡಿ ಸ್ತಂಭಗಳನ್ನು ಅದು ಕಿತ್ತೆಸಿದಿದೆ. ಆದರೆ, ಭಾರತದ ಭೂ ಪ್ರದೇಶಗಳನ್ನು ತನ್ನ ನಕ್ಷೆಯಲ್ಲಿ ಸೇರಿಸಿಕೊಳ್ಳುವಾಗ ಇದ್ದ ಉತ್ಸಾಹವನ್ನು ಚೀನಾ ದೇಶ ತನ್ನದೇ ಭೂಪ್ರದೇಶಗಳನ್ನು ತೆಕ್ಕೆಗೆ ಹಾಕಿಕೊಂಡಾಗ ವಿರೋಧಿಸಲು ತೋರಿಸುತ್ತಿಲ್ಲ. ನೇಪಾಳ ಕಾಂಗ್ರೆಸ್ ಈ ವಿಚಾರವಾಗಿ ಸದ್ಯ ಮೌನಕ್ಕೆ ಶರಣಾಗಿದೆ.
ನೇಪಾಳಿ ಕಾಂಗ್ರೆಸ್ ಮೌನವನ್ನು ಟೀಕಿಸಿರುವ ಅಲ್ಲಿನ ವಿರೋಧ ಪಕ್ಷ, ಅತಿಕ್ರಮಣ ಪ್ರದೇಶವನ್ನು ಹಿಂದಕ್ಕೆ ಪಡೆಯಲು ಚೀನಾದೊಂದಿಗೆ ಮಾತುಕತೆ ನಡೆಸುವಂತೆ ಸಂಸತ್ತಿನ ಕೆಳಮನೆಯಲ್ಲಿ ವಿಚಾರ ಮಂಡಿಸಿತು.
ಇಲ್ಲಿನ ದೋಖ್ಲಾ, ಹಮ್ಲಾ, ಸಿಂಧುಪಾಲ್ಚೌಕ್, ಗೂರ್ಖಾ ಮತ್ತು ರಸೂವಾಗಳ 64 ಹೆಕ್ಟೇರ್ ಭೂಮಿಯನ್ನು ಚೀನಾ ಅತಿಕ್ರಮಿಸಿದೆ ಎಂದು ಪ್ರತಿಪಕ್ಷಗಳು ಹೌಸ್ ಆಫ್ ರೆಪ್ರೆಸೆಂಟೇಟಿವ್ ಕಾರ್ಯದರ್ಶಿಗೆ ಪತ್ರವನ್ನು ಕಳುಹಿಸಿವೆ. ಭೂಪಟದಲ್ಲಿ ರುಯಿ ಗೌನ್ ಪ್ರದೇಶ ನೇಪಾಳಕ್ಕೆ ಒಳಪಟ್ಟಿದೆ. ಆದರೆ ಇದನ್ನು ಚೀನಾ ತನ್ನ ಸ್ವಾಯತ್ತ ಪ್ರದೇಶದಡಿ ಸೇರಿಸಿಕೊಂಡಿದೆ.
ಈ ಮೂಲಕ ನೇಪಾಳದ 72 ಮನೆಗಳೀಗ ಚೀನಾದ ಟಿಬೆಟ್ ಸ್ವಾಯತ್ತ ಪ್ರದೇಶದ ಅಡಿಯಲ್ಲಿ ಬರುತ್ತಿವೆ. ಅಂತೆಯೇ, ಡಾರ್ಚುಲಾ ಜಿಲ್ಲೆಗಳ ಜಿಯುನಲ್ಲಿರುವ 18 ಮನೆಗಳನ್ನು ಚೀನಾ ಕಬಳಿಸಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ರುಯಿ ಗ್ರಾಮವನ್ನು ಹೊರತುಪಡಿಸಿ, ಚೀನಾವು ನೇಪಾಳದಾದ್ಯಂತ 11 ಜಾಗಗಳ ಆಯಕಟ್ಟಿನ ಭೂಮಿಯನ್ನೂ ಬಿಟ್ಟಿಲ್ಲ. ಚೀನಾದ ಗಡಿಯಾಗಿರುವ ನೇಪಾಳದ ನಾಲ್ಕು ಜಿಲ್ಲೆಗಳಲ್ಲಿ ಸುಮಾರು 36 ಹೆಕ್ಟೇರ್ ಭೂಮಿಯನ್ನು ಡ್ರ್ಯಾಗನ್ ಕಬಳಿಸಿದೆ.