ಕ್ವಾರ್ಟರ್-ಮೊರಿನ್ (ಹೈಟಿ):ಅಧ್ಯಕ್ಷ ಜೊವೆನೆಲ್ ಮೋಸ್ ಹತ್ಯೆಯಿಂದಾಗಿ ದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮೋಸ್ ಹತ್ಯೆಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಅವರ ಸಮುದಾಯದವರು ದಂಗೆ ಎದ್ದಿದ್ದು, ರಸ್ತೆಯಲ್ಲಿ ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭೀತಿಯಿಂದ ಊರು ತೊರೆಯುತ್ತಿರುವ ಜನ
ಅಲ್ಲದೇ, ವಾಹನಗಳ ಸಂಚಾರಗಳಿಗೂ ನಿರ್ಬಂಧ ವಿಧಿಸಿದ್ದು, ಗುಂಪುಗಳು ಮಾರಕಾಸ್ತ್ರಗಳಿಂದ ಜನರಿಗೆ ಬೆದರಿಕೆಯೊಡುತ್ತಿದ್ದಾರೆ. ಹಲವೆಡೆ ಮೋಸ್ಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ನಡೆಯುತ್ತಿದ್ದರೆ, ಕೆಲವೆಡೆ ಹಿಂಸಾತ್ಮಕ ಘಟನೆಗಳು ಜರುಗುತ್ತಿರುವುದು ಜನರಲ್ಲಿ ಭೀತಿ ಉಂಟು ಮಾಡಿದೆ. ಹಿಂಸಾತ್ಮಕ ಘಟನೆಗಳಿಂದಾಗಿ ಸಾವಿರಾರು ಕಾರ್ಮಿಕರು, ಕೆಲಸ ಬಿಟ್ಟು ಊರುಗಳನ್ನು ತೊರೆಯುತ್ತಿದ್ದಾರೆ. ಪರಿಸ್ಥಿತಿ ಹತೋಟಿಗೆ ತರಲು ಯತ್ನಿಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೂತನ ಅಧ್ಯಕ್ಷರಾಗಿ ಹೆನ್ರಿ
ಮಂಗಳವಾರವಷ್ಟೇ ಹೈಟಿಯ ನೂತನ ಅಧ್ಯಕ್ಷರಾಗಿ ಏರಿಯಲ್ ಹೆನ್ರಿ ಅಧಿಕಾರ ಸ್ವೀಕರಿಸಿದರು. ವೃತ್ತಿಯಿಂದ ನರರೋಗ ಶಸ್ತ್ರಚಿಕಿತ್ಸಕರಾಗಿರುವ ಹೆನ್ರಿ, ಈ ಮೊದಲು ಸಂಪುಟ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿ ಅವರು, ‘ನಾವು ಮಾಡಬೇಕಾದ ಕಾರ್ಯಗಳು ಬಹಳ ಕಠಿಣ ಹಾಗೂ ಸಂಕೀರ್ಣವಾದವುಗಳಾಗಿವೆ. ಎಲ್ಲರೂ ಒಗ್ಗಟ್ಟಿನಿಂದ ಈ ಸವಾಲುಗಳನ್ನು ಎದುರಿಸೋಣ’ ಎಂದರು. ‘ಮಾತುಕತೆ, ಚರ್ಚೆಯಲ್ಲಿ ನನಗೆ ನಂಬಿಕೆ ಇದೆ. ಹೀಗಾಗಿ ಯಾವುದೇ ವಿಷಯ ಕುರಿತು ನಿರ್ಧಾರ ಕೈಗೊಳ್ಳುವ ಮೊದಲು ಒಮ್ಮತ ಮೂಡಿಸಿ, ಮುಂದುವರಿಯುವೆ’ ಎಂದೂ ಹೇಳಿದರು.