ವಾಷಿಂಗ್ಟನ್(ಅಮೆರಿಕ):ಮತದಾನ ದಿನದಂದು ಅಮೆರಿಕದಲ್ಲಿ ಎರಡನೇ ಅತಿ ಹೆಚ್ಚು ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಮಂಗಳವಾರ 91,000 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಮಾಹಿತಿ ನೀಡಿದೆ.
ಅಮೆರಿಕದಲ್ಲಿ ಈವರೆಗೆ ಸುಮಾರು 9.4 ದಶಲಕ್ಷ ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. ಇತ್ತೀಚಿನ ವಾರಗಳಲ್ಲಿ ಅಮೆರಿಕದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾಗಿದ್ದು, ಶೀತ ವಾತಾವರಣದಿಂದಾಗಿ ಜನರು ಮನೆಯಲ್ಲೇ ಹೆಚ್ಚು ಸಮಯ ಕಳೆಯುವಂತಾಗಿದೆ.
ಸಣ್ಣ ಸಣ್ಣ ಕಾರ್ಯಕ್ರಮಗಳು ಮತ್ತು ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿರುವುದು ಪ್ರಕರಣ ಹೆಚ್ಚಾಗಲು ಕಾರಣವಾಗಿದೆ ಎಂದು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅ್ಯಂಡ್ ಪ್ರಿವೆನ್ಷನ್(ಸಿಡಿಸಿ) ಹೇಳಿದೆ. ಕೊರೊನಾ ಸೋಂಕಿಗೆ ಒಳಗಾದ ಇಲ್ಲಿನ ಮತದಾರರಿಗೆ 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ವೈಯಕ್ತಿಕವಾಗಿ ಮತ ಚಲಾಯಿಸಲು ಅವಕಾಶ ನೀಡಲಾಯಿತು.
ಅನಾರೋಗ್ಯ ಅಥವಾ ಕ್ವಾರಂಟೈನ್ನಲ್ಲಿರುವ ಮತದಾರರು ಚುನಾವಣಾ ಕೆಲಸಕ್ಕೆ ನೇಮಿಸಲ್ಪಟ್ಟವರು ಮತ್ತು ಇತರ ಮತದಾರರನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ಆಗಾಗ ಕೈಗಳಿಗೆ ಸ್ಯಾನಿಟೈಸ್ ಮಾಡಿಕೊಳ್ಳಬೇಕು ಎಂದು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅ್ಯಂಡ್ ಪ್ರಿವೆನ್ಷನ್(ಸಿಡಿಸಿ) ಸಲಹೆ ನೀಡಿದೆ.