ವಿಶ್ವಸಂಸ್ಥೆ:ಈಗಾಗಲೇ ಪ್ಯಾಲೆಸ್ತೀನ್ ತಿರಸ್ಕರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿವಾದಾತ್ಮಕ 'ಮಧ್ಯಪ್ರಾಚ್ಯ ಶಾಂತಿ ಯೋಜನೆ' ಕುರಿತು ಚರ್ಚಿಸಲು ಯುಎನ್ ಸೆಕ್ಯುರಿಟಿ ಕೌನ್ಸಿಲ್ (ಯುಎನ್‌ಎಸ್‌ಸಿ) ಮುಂದಿನ ವಾರ ಸಭೆ ಸೇರಲಿದೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ.
ಈ ಸಭೆಯಲ್ಲಿ ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಮತ್ತು ಇಸ್ರೇಲ್ ರಾಯಭಾರಿ ಡ್ಯಾನಿ ಡಾನನ್ ಭಾಗವಹಿಸಲಿದ್ದಾರೆ ಎಂದು ಮಾಧ್ಯಮಗಳು ಉಲ್ಲೇಖಿಸಿವೆ. ಪ್ಯಾಲೆಸ್ತೀನ್ ನಿಯೋಗವು ಟ್ರಂಪ್ ನೀಡಿರುವ ವಿವಾದಾತ್ಮಕ ಯೋಜನೆಯನ್ನು ಖಂಡಿಸುವ ಸಾಧ್ಯತೆ ಇರುವುದರಿಂದ, ಯುಎಸ್ ತನ್ನ ವಿಟೋ ಅಧಿಕಾರ ಬಳಸಿ ನಿರ್ಣಯ ತಡೆಯುವ ಎಲ್ಲ ಸಾಧ್ಯತೆಗಳಿವೆ.
ಜನವರಿ 28 ರಂದು ಟ್ರಂಪ್ ತಮ್ಮ ವಿವಾದಾತ್ಮಕ ಯೋಜನೆಯಾದ "ಶತಮಾನದ ಒಪ್ಪಂದ"ವನ್ನು ಉಲ್ಲೇಖಿಸಿದ್ರು. ಈ ಯೋಜನೆ ಪ್ರಕಾರ ಜೆರುಸಲೆಮ್ ಇಸ್ರೇಲ್ನ "ಅವಿಭಜಿತ ರಾಜಧಾನಿ" ಎಂದು ಘೋಷಿಸಬೇಕಾಗುತ್ತದೆ. ಇದರಿಂದ ಎರಡು ದೇಶಗಳ ಸಮಸ್ಯೆಗೆ ಪರಿಹಾರ ನೀಡಿದಂತಾಗುತ್ತದೆ ಎಂದು ಹೇಳಿದ್ರು.
ಅಮೆರಿಕ ಅಧ್ಯಕ್ಷರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಶ್ವೇತಭವನದಲ್ಲಿ 80 ಪುಟಗಳ ಯೋಜನೆಯನ್ನು ವಿವರಿಸಿದ್ದಾರೆ. ಇದು ಎರಡು ದೇಶಗಳ ಸಮಸ್ಯೆಗೆ ಪರಿಹಾರವನ್ನು ನೀಡಲಿದೆ ಎಂದು ಕೂಡ ತಿಳಿಸಿದ್ದಾರೆ. ಯೋಜನೆಯನ್ನು ಅನಾವರಣಗೊಳಿಸಿದ ನಂತರ ಯುಎನ್ ವಕ್ತಾರರು, ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಎರಡು ದೇಶಗಳ ಸಮಸ್ಯೆ ಪರಿಹಾರದ ಬಗ್ಗೆ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಮತ್ತು ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದಿದ್ದರು.
ಎರಡು ದೇಶದ ಶಾಂತಿ ಮತ್ತು ಸುರಕ್ಷತೆ ಹಾಗೂ ದೇಶಗಳ ಹಿತ ದೃಷ್ಟಿಯಿಂದ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅಮೆರಿಕ ತನ್ನ ನಿಲುವು ಸಮರ್ಥಿಸಿಕೊಂಡಿದೆ. ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಯುಎನ್ಗೆ ಪ್ಯಾಲಿಸ್ತೀನ್ ವೀಕ್ಷಕರಾದ ರಿಯಾದ್ ಮನ್ಸೂರ್ ಅವರು ಟ್ರಂಪ್ ಅವರ ಯೋಜನೆ "ವಿಫಲವಾಗಲಿದೆ" ಎಂದು ಹೇಳಿದ್ದಾರೆ.