ವಾಷಿಂಗ್ಟನ್ ಡಿಸಿ(ಯು.ಎಸ್.ಎ): ಅಮೆರಿಕ ಸೆನೆಟ್(ಸಂಸತ್)ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಗೆಗಿನ ದೋಷಾರೋಪ ಪಟ್ಟಿಯ ವಿಚಾರಣೆ ನಡೆಯುತ್ತಿದ್ದು, ಇನ್ನೊಂದೆಡೆ ಮಂಗಳವಾರ ನಡೆದ ಯುನೈಟೆಡ್ ಸ್ಟೇಟ್ಸ್ ಕಾಂಗ್ರೆಸ್ನ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡಿದರು.
ತಮ್ಮ ವಿರುದ್ಧ ದೋಷಾರೋಪಣೆ ಹೊರಿಸಿದ್ದರ ಬಗ್ಗೆ ಡೆಮಾಕ್ರಟರನ್ನು ತೀವ್ರವಾಗಿ ಟೀಕಿಸಿರುವ ಟ್ರಂಪ್, ಹಿಂದಿನ ಒಬಾಮಾ ಆಡಳಿತವನ್ನ ಹಿಗ್ಗಾಮುಗ್ಗಾ ಟೀಕಿಸಿದ್ದಾರೆ. ಇದೇ ವೇಳೆ ಅತ್ಯಂತ ಕಡಿಮೆ ದರದಲ್ಲಿ ಆರೋಗ್ಯ ಯೋಜನೆ ಜಾರಿಗೊಳಿಸುವ ಭರವಸೆ ನೀಡಿದ್ದಾರೆ. ಜಂಟಿ ಸಂಸತ್ ಅಧಿವೇಶನದಲ್ಲಿ ಇರಾನ್ ವಿರುದ್ಧ ಕೈಗೊಂಡ ಕ್ರಮ, ಸುಲೇಮಾನಿ ಹತ್ಯೆಯನ್ನ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಚೀನಾ ವಿರುದ್ಧವೂ ಹರಿಹಾಯ್ದಿರುವ ಅವರು, ಆ ದೇಶದ ವಿರುದ್ಧ ಕೈಗೊಂಡ ವಾಣಿಜ್ಯ ಯುದ್ಧವನ್ನೂ ಸಮರ್ಥಿಸಿಕೊಂಡಿದ್ದಾರೆ. ಬಳಿಕ ಈಗ ಮಾಡಿಕೊಂಡಿರುವ ಚೀನಾ ಜೊತೆಗಿನ ವ್ಯಾಪಾರ ಒಪ್ಪಂದದ ಬಗ್ಗೆಯೂ ಮಾತನಾಡಿದ್ದಾರೆ.
ಅಮೆರಿಕದ ನೀತಿಗಳನ್ನ ಸಮರ್ಥಿಸಿಕೊಂಡಿರುವ ಅವರು, ರಕ್ಷಣೆಗೆ ಮೊದಲ ಆದ್ಯತೆ ಎಂದು ಘೋಷಿಸಿದ್ದಾರೆ. ಇದೇ ವೇಳೆ ಧಾರ್ಮಿಕ ಸ್ವಾತಂತ್ರ್ಯವನ್ನ ಅವರು ಬಲವಾಗಿ ಪ್ರತಿಪಾದನೆ ಮಾಡಿದ್ದಾರೆ.
ಬುಧವಾರ ಬೆಳಗ್ಗೆ 8:30 ಸುಮಾರಿಗೆ ಶ್ವೇತ ಭವನದಿಂದ ಟ್ರಂಪ್ ಭಾಷಣ ನೇರ ಪ್ರಸಾರವಾಯಿತು. ಅಧಿಕಾರ ದುರುಪಯೋಗ ಮತ್ತು ನ್ಯಾಯಾಲಯದ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆ, ಇಂದು ಸೆನೆಟ್ನಲ್ಲಿ ಟ್ರಂಪ್ಗೆ ಮತದಾನದ ಮೂಲಕ ಮಹಾಭಿಯೋಗ ಪ್ರಕ್ರಿಯೆ ನಡೆಸಲಾಗುತ್ತದೆ. ಇಂದು ಸೆನೆಟ್ ನಡೆಯಲಿರುವ ಭಾಷಣ, ಗ್ರೇಟ್ ಅಮೇರಿಕನ್ ಕಮ್ ಬ್ಯಾಕ್ ಆಗಿರುತ್ತದೆ ಎಂದು ವಾಯ್ಸ್ ಆಫ್ ಅಮೇರಿಕ ಅಭಿಪ್ರಾಯಪಟ್ಟಿದೆ.
ಇನ್ನು ಈ ಬಗ್ಗೆ ಆಕ್ರಾನ್ ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನ ಪ್ರಾಧ್ಯಾಪಕ ಡೇವಿಡ್ ಕೊಹೆನ್ ಹೇಳಿಕೆ ನೀಡಿದ್ದು, ನಮ್ಮ ರಾಷ್ಟ್ರದ ಇತಿಹಾಸದಲ್ಲೇ ದೋಷಾರೋಪಕ್ಕೆ ಒಳಪಟ್ಟ ಅಧ್ಯಕ್ಷರಿಂದ ಮರುಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿರುವುದು ಇದೇ ಮೊದಲು ಎಂದಿದ್ದಾರೆ.
ಅಮೆರಿಕದ 244 ವರ್ಷಗಳ ಇತಿಹಾಸದಲ್ಲಿ ಇದು ಮೂರನೇ ಬಾರಿಗೆ ಯುಎಸ್ ಅಧ್ಯಕ್ಷರನ್ನು ದೋಷಾರೋಪಣೆ ಮಾಡಲಾಗಿದ್ದು, ಅಧಿಕಾರದಿಂದ ತೆಗೆದುಹಾಕುವ ಗುರಿಯನ್ನು ವಿಪಕ್ಷಗಳು ಹೊಂದಿವೆ. 1868 ರಲ್ಲಿ ಆಂಡ್ರ್ಯೂ ಜಾನ್ಸನ್ ಮತ್ತು 1998 ರಲ್ಲಿ ಬಿಲ್ ಕ್ಲಿಂಟನ್ ಅವರನ್ನು ಈ ಹಿಂದೆ ಸೆನೆಟ್ನಲ್ಲಿ ದೋಷಾರೋಪಣೆ ಮಾಡಿದ್ದು, ಭ್ರಷ್ಟಾಚಾರದ ಹಗರಣದ ಆರೋಪದ ಹಿನ್ನೆಲೆ ಅಧ್ಯಕ್ಷ ರಿಚರ್ಡ್ ನಿಕ್ಸನ್ 1974 ರಲ್ಲಿ ರಾಜೀನಾಮೆ ನೀಡಿದ್ದರು.