ನ್ಯೂಯಾರ್ಕ್:ಭಾರತ ಮತ್ತು ಚೀನಾ ನಡುವೆ ಉದ್ಭವಿಸಿರುವ ಗಡಿ ವಿವಾದವನ್ನು ಇತ್ಯರ್ಥ ಪಡಿಸಲು ಅಮೆರಿಕ ಮಧ್ಯಸ್ಥಿಕೆ ವಹಿಸಲು ಸಿದ್ಧವಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಎರಡು ದೇಶಗಳ ನಡುವೆ ಈಗ ಉಲ್ಬಣಗೊಳ್ಳುತ್ತಿರುವ ಗಡಿ ವಿವಾದವನ್ನು ಬಗೆಹರಿಸಲು ಅಮೆರಿಕ ಸಿದ್ಧವಾಗಿದೆ. ಈ ವಿಷಯವನ್ನು ನಾವು ಮೊದಲೇ ಪ್ರಸ್ತಾಪಿಸಿದ್ದೆವು. ಆದರೆ, ಭಾರತ ನಿರಾಕರಿಸಿತ್ತು. ಈ ವಿಷಯದಲ್ಲಿ ಮೂರನೇ ವ್ಯಕ್ತಿಯ ಅವಶ್ಯಕತೆ ಇಲ್ಲ ಎಂದಿತ್ತು ಎಂದು ಟ್ರಂಪ್ ಟ್ವೀಟ್ನಲ್ಲಿ ಹೇಳಿದ್ದಾರೆ.
ಸುಮಾರು 3,500 ಕಿ.ಮೀ ಉದ್ದದ ನೈಜ ಗಡಿ ರೇಖೆಯ (ಎಲ್‌ಎಸಿ) ಭಾರತ ಮತ್ತು ಚೀನಾ ನಡುವಿನ ವಾಸ್ತವಿಕ ಗಡಿಯಾಗಿದೆ. ಲಡಾಖ್ ಮತ್ತು ಉತ್ತರ ಸಿಕ್ಕಿಂನ ಎಲ್‌ಎಸಿ ಉದ್ದಕ್ಕೂ ಹಲವು ಪ್ರದೇಶಗಳಲ್ಲಿ ಇತ್ತೀಚೆಗೆ ಭಾರತೀಯ ಮತ್ತು ಚೀನಿ ಸೇನೆಗಳ ಮುಖಾಮುಖಿಗೆ ಕಾರಣವಾಗಿವೆ. ಗಡಿಯ ವಿಚಾರವಾಗಿ ಎರಡು ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.
ಲಡಾಖ್ ಮತ್ತು ಸಿಕ್ಕಿಂನ ಎಲ್‌ಎಸಿ ಪ್ರದೇಶದಲ್ಲಿ ಚೀನಾವೂ ತನ್ನ ಸೈನಿಕರನ್ನು ಛೂ ಬಿಟ್ಟಿದೆ ಎಂಬುದು ಭಾರತದ ಆರೋಪವಾಗಿದೆ. ಭಾರತೀಯ ಸೈನಿಕರು ಅತಿಕ್ರಮಣ ಮಾಡಿರುವುದರಿಂದ ಇದು ಎರಡು ಸೇನೆಗಳ ನಡುವೆ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಚೀನಾ ಆರೋಪಿಸಿದೆ. ಆದರೆ, ಭಾರತ ಈ ಆರೋಪವನ್ನು ಅಲ್ಲಗೆಳೆದಿದೆ.
ಗಡಿ ನಿರ್ವಹಣೆಯ ಬಗ್ಗೆ ಭಾರತ ಯಾವಾಗಲೂ ಅತ್ಯಂತ ಜವಾಬ್ದಾರಿಯುತ ಮಾರ್ಗವನ್ನು ಅನುಸರಿಸುತ್ತದೆ. ಎಲ್ಲಾ ಭಾರತೀಯ ಚಟುವಟಿಕೆಗಳನ್ನು ಗಡಿಯ ಬದಿಯಲ್ಲಿ ನಡೆಸಲಾಗಿದೆ. ಭಾರತ ತನ್ನ ಸಾರ್ವಭೌಮತ್ವ ಮತ್ತು ಸುರಕ್ಷತೆಯನ್ನು ರಕ್ಷಿಸಲು ಬದ್ಧವಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.