ವ್ಯಾಂಕೋವರ್( ಕೆನಡಾ): ಪೆಸಿಫಿಕ್ ಸಾಗರದ ಕರಾವಳಿಯ ಸಮೀಪದಲ್ಲಿರುವ ಕೆನಡಾದ ಬ್ರಿಟಿಷ್ ಕೊಲಂಬಿಯಾ (British Columbia) ಭಾಗದಲ್ಲಿ ಭಾರಿ ಮಳೆ, ಭೂ ಕುಸಿತ, ಪ್ರವಾಹದ ಸ್ಥಿತಿ ನಿರ್ಮಾಣವಾಗಿದ್ದು, ಮಹಾಮಳೆಗೆ ಓರ್ವ ಮಹಿಳೆ ಮೃತಪಟ್ಟಿದ್ದಾರೆ.
ಸೋಮವಾರ ಲಿಲ್ಲೂಯೆಟ್ ಪಟ್ಟಣದ ಸಮೀಪವಿರುವ ಹೆದ್ದಾರಿ 99 ರಲ್ಲಿ ಭೂಕುಸಿತ (landslide) ಸಂಭವಿಸಿದ್ದು, ಮೃತ ದೇಹಗಳನ್ನು ಹೊರ ತೆಗೆಯುವ ಕಾರ್ಯಾಚರಣೆಯನ್ನು ಸಿಬ್ಬಂದಿ ಮುಂದುವರೆದಿದ್ದಾರೆ. ಈಗಾಗಲೇ ಓರ್ವ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ರಕ್ಷಣಾ ಸಿಬ್ಬಂದಿ ಕಾರ್ಯಚರಣೆ ಮುಂದುವರೆಸಿದ್ದಾರೆ. ಜೊತೆಗೆ ಕೆಲ ಹೆದ್ದಾರಿಗಳನ್ನು ಬಂದ್ ಮಾಡಲಾಗಿದೆ ಎಂದು ಪೆಂಬರ್ಟನ್ ಜಿಲ್ಲಾ ರಕ್ಷಣಾ ಘಟಕದ ವ್ಯವಸ್ಥಾಪಕ ಡೇವಿಡ್ ಮ್ಯಾಕೆಂಜಿ ತಿಳಿಸಿದ್ದಾರೆ.
ಅಧಿಕ ಪ್ರಮಾಣದಲ್ಲಿ ಕಸರು ಇರುವ ಕಾರಣ ವಿಕೋಪ ನಿರ್ವಹಣಾ ಸಿಬ್ಬಂದಿ ಹುಡುಕಾಟ ನಡೆಸಲು ಕಷ್ಟಕರವಾಗುತ್ತಿದೆ. ಎಷ್ಟು ಜನ ಮತ್ತು ವಾಹನಗಳು ಭೂಮಿಯಲ್ಲಿ ಹೂತು ಹೋಗಿದ್ದಾರೆ ಎಂದು ಇನ್ನೂ ಮಾಹಿತಿ ತಿಳಿದು ಬಂದಿಲ್ಲ. ತನಿಖಾಧಿಕಾರಿಗಳು ಕಾಣೆಯಾದ ಇಬ್ಬರ ಕುರಿತು ವರದಿ ಸ್ವೀಕರಿಸಿದ್ದಾರೆ. ಇವರ ಜೊತೆಗೆ ಇತರ ವಾಹನ ಚಾಲಕರು ಸಹ ಕೆಸರಿನಲ್ಲಿ ಹೂತು ಹೋಗಿರಬಹುದು ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೋಲಿಸ್ ಠಾಣಾ ಸಿಬ್ಬಂದಿ ಜಾನೆಲ್ಲೆ ಶೋಯಿಹೆಟ್ ಹೇಳಿದ್ದಾರೆ.
ಇನ್ನು ಸೋಮವಾರ ಬೆಳಗ್ಗೆ ಅಣೆಕಟ್ಟೆಯೊಂದು ಒಡೆದ ಪರಿಣಾಮ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಪರಿಣಾಮ ಮೆರಿಟ್, ಅಗಾಸ್ಸಿಜ್, ಅಬಾಟ್ಸ್‌ಫೋರ್ಡ್ ಮತ್ತು ಪ್ರಿನ್ಸ್‌ಟನ್‌ನಲ್ಲಿರುವ ಕುಟುಂಬಗಳ ಸ್ಥಳಾಂತರಕ್ಕೆ ಸರ್ಕಾರ ಆದೇಶ ನೀಡಿತ್ತು. ಮೆರಿಟ್ ಸೇರಿದಂತೆ ಬ್ರಿಟಿಷ್ ಕೊಲಂಬಿಯಾ, ಅಬಾಟ್ಸ್‌ಫೋರ್ಡ್‌ನಲ್ಲಿ ಸುಮಾರು 1,100 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.