ವಾಷಿಂಗ್ಟನ್: ಮಹಾರಾಷ್ಟ್ರದಲ್ಲಿ ಸುರಿದ ಧಾರಾಕಾರ ಮಳೆ ಹಾಗೂ ಜಲಾಶಯಗಳಿಂದ ಬಿಡುಗಡೆಯಾದ ನೀರು ಪ್ರವಾಹ ಪರಿಸ್ಥಿತಿ ತಂದಿಟ್ಟಿದೆ. ಈ ಭೀಕರ ಪ್ರವಾಹಕ್ಕೆ ಮಹಾರಾಷ್ಟ್ರ ಅಕ್ಷರಶಃ ತಲ್ಲಣಗೊಂಡಿದೆ. ಈ ಹಿನ್ನೆಲೆ ನೆರವು ನೀಡಲು 'ಅಮೆರಿಕನ್ ನಾನ್ ಪ್ರಾಫಿಟ್ ಆರ್ಗನೈಜೇಷನ್' ಎನ್ಜಿಒ ಸಂಸ್ಥೆಯೊಂದು ಮುಂದಾಗಿದ್ದು, ವೈದ್ಯಕೀಯ ಸೇವೆ ಒದಗಿಸುತ್ತಿದೆ.
ರಾಜ್ಯದ ಸೊಲ್ಲಾಪುರ, ಕೊಲ್ಲಾಪುರ, ಸಾಂಗ್ಲಿ, ಪುಣೆ, ಸತಾರಾ ಮತ್ತು ಮರಾಠವಾಡ, ಲಾತೂರ್, ಉಸ್ಮಾನಾಬಾದ್ ಮತ್ತು ಬೀಡ್ ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳಾಗಿವೆ. ಸಾವಿರಾರು ಜನರನ್ನು ಈಗಾಗಲೇ ಸ್ಥಳಾಂತರ ಮಾಡಲಾಗಿದ್ದು, 200 ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗಿ ಮಹಾರಾಷ್ಟ್ರದ ನೆರವಿಗೆ ಯುಎಸ್ ಎನ್ಜಿಒ ಸಂಸ್ಥೆಯೊಂದು ಸಹಾಯ ಹಸ್ತ ಚಾಚಿದ್ದು, ಸಾಂಗ್ಲಿ, ಸತಾರಾ ಮತ್ತು ರತ್ನಗಿರಿಗೆ ಮೂರು ವೈದ್ಯಕೀಯ ತಂಡಗಳನ್ನು ಬುಧವಾರ ಕಳಿಸಿರುವುದಾಗಿ ಅಮೆರಿಕನ್ ಲಾಭರಹಿತ ಸಂಸ್ಥೆ (American non-profit organization) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.