ವಾಷಿಂಗ್ಟನ್:ಕೊರೊನಾವೈರಸ್ ಬಿಕ್ಕಟ್ಟಿನ ಮಧ್ಯೆ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಅಮೆರಿಕದ ಹಿಂದೂ ಸಂಘಟನೆಗಳ ಗುಂಪು ವಿಶೇಷ ಸಹಾಯವಾಣಿಯನ್ನು ಪ್ರಾರಂಭಿಸಿದೆ.
ಹಿಂದೂ ಯುವ, ಭಾರತೀಯ, ವಿವೇಕಾನಂದ ಹೌಸ್ ಮತ್ತು ಸೇವಾ ಇಂಟರ್ನ್ಯಾಷನಲ್ ಸಂಸ್ಥೆಗಳು ಒಂದುಗೂಡಿ, ಸಹಾಯವಾಣಿ 802-750-YUVA (9882) ಆರಂಭಿಸಿದೆ.
ದೇಶಾದ್ಯಂತ ಸ್ವಯಂಸೇವಕರಾಗಿರುವ 90 ವಿದ್ಯಾರ್ಥಿಗಳಿಂದ ನಡೆಯುತ್ತಿರುವ ಈ ಸಹಾಯವಾಣಿ, ಭಾರತೀಯ ವಿದ್ಯಾರ್ಥಿಗಳಿಗೆ ಹಾಗೂ ತೊಂದರೆಯಲ್ಲಿರುವವರಿಗೆ ಅಗತ್ಯ ಸಾಮಗ್ರಿ, ದಿನಸಿ ಮತ್ತು ಔಷಧ ತಲುಪಿಸುವುದರ ಜೊತೆಗೆ ವಸತಿ ಸೌಕರ್ಯಗಳನ್ನು ಒದಗಿಸುತ್ತದೆ ಎಂದು ವಾಷಿಂಗ್ಟನ್ ಡಿಸಿಯ ಸ್ಥಳೀಯ ಸಂಘಟಕರಲ್ಲಿ ಒಬ್ಬರಾದ ಪ್ರೇಮ್ ರಂಗ್ವಾನಿ ಹೇಳಿದರು.
ಸುಮಾರು 2,50,000 ಭಾರತೀಯ ವಿದ್ಯಾರ್ಥಿಗಳು ಅಮೆರಿಕದ ವಿವಿಧ ವಿಶ್ವವಿದ್ಯಾಲಯಗಳಿಗೆ ದಾಖಲಾಗಿದ್ದು, ಅದರಲ್ಲಿ ಬಹುತೇಕ ಎಲ್ಲಾ ವಿಶ್ವವಿದ್ಯಾಲಯಗಳನ್ನು ಮುಚ್ಚಲಾಗಿದೆ. ವಿದ್ಯಾರ್ಥಿಗಳು ತಮ್ಮ ಹಾಸ್ಟೆಲ್‌ಗಳನ್ನು ಖಾಲಿ ಮಾಡುವಂತೆ ಕೋರಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ವಸತಿ ಸೌಕರ್ಯಗಳನ್ನು ಹುಡುಕಬೇಕಾಗಿದ್ದು. ಅಂಥವರಿಗೆ ಸಹಾಯವಾಣಿ ನೆರವಾಗಲಿದೆ.