ಕರ್ನಾಟಕ

karnataka

ETV Bharat / international

ಗ್ರೀನ್‌ಲ್ಯಾಂಡ್​​ನಲ್ಲಿ ಭಾರಿ ಮಳೆ, ವಿಜ್ಞಾನಿಗಳಲ್ಲಿ ಆತಂಕ: ಭಾರತಕ್ಕೂ ಎಚ್ಚರಿಕೆಯ ಕರೆಗಂಟೆ - ಜಾಗತಿಕ ತಾಪಮಾನ ಏರಿಕೆ

ಮಳೆಹನಿ ಮರುಭೂಮಿಗೆ ಬಿದ್ದರೆ, ಅಲ್ಲಿ ಹಸಿರು ಸೃಷ್ಟಿಯಾಗಿ ಜೀವಿಗಳಿಗೆ ಉಪಯೋಗವಾಗಬಹುದು. ಅದೇ ಮಳೆ ಸಮುದ್ರಕ್ಕೆ ಬಿದ್ದರೆ ವ್ಯರ್ಥ. ಆದರೆ ವಿಶ್ವದ ಅತಿ ದೊಡ್ಡ ದ್ವೀಪಪ್ರದೇಶ, ಮಂಜುಗಡ್ಡೆಯಿಂದ ಆವೃತವಾದ ಗ್ರೀನ್​ಲ್ಯಾಂಡ್​ ಮೇಲೆ ಬಿದ್ದರೆ, ಕೋಲಾಹಲವೇ ಉಂಟಾಗುತ್ತದೆ. ಅದು ಹೇಗೆ.? ನೋಡೋಣ ಬನ್ನಿ

Green land Rain and global temperature
ಗ್ರೀನ್ ಲ್ಯಾಂಡ್​​ನಲ್ಲಿ ಭಾರಿ ಮಳೆ.. ವಿಜ್ಞಾನಿಗಳಲ್ಲಿ ಶುರುವಾದ ಆತಂಕ: ಏಕೆ ಗೊತ್ತಾ?

By

Published : Aug 24, 2021, 8:14 AM IST

ಕೋಪನ್ ಹೇಗನ್(ಡೆನ್ಮಾರ್ಕ್)​:ಮಳೆ ಭೂಮಿಯ ಮೇಲಿನ ಪ್ರತಿಯೊಂದು ಜೀವಿಗಳಿಗೂ ಅನಿವಾರ್ಯ. ಮಳೆಯ ಪ್ರಮಾಣ ಹೆಚ್ಚು-ಕಡಿಮೆಯಾದರೂ ಅದು ಕೂಡಾ ಅಪಾಯವೇ. ಆಗಸದಿಂದ ಬೀಳುವ ಮಳೆ ಭೂಮಿಯ ಮೇಲೆ ಹಸಿರು ಹೊದಿಕೆಗೆ ಕಾರಣವಾದರೆ, ಈಗ ಹಸಿರಭೂಮಿಯಲ್ಲಿ ಆತಂಕ ಉಂಟುಮಾಡಿದೆ.

ಹೌದು, ದಟ್ಟ ಮಂಜಿನಿಂದ ಆವರಿಸಿರುವ ಆರ್ಕ್‌ಟಿಕ್ ಧ್ರುವದ ಸಮೀಪವಿರುವ ಗ್ರೀನ್‌ಲ್ಯಾಂಡ್​ನಲ್ಲಿ ಭಾರಿ ಮಳೆ ಬೀಳುತ್ತಿದೆ. ಈ ಮಳೆಯ ಕಾರಣ ಜಗತ್ತಿನಲ್ಲಿ ತಾಪಮಾನ ಬದಲಾವಣೆಯಂಥ ಸಮಸ್ಯೆಗಳು ಆಗಬಹುದು ಅನ್ನೋದು ವಿಜ್ಞಾನಿಗಳ ಆತಂಕ.

ವಿಶ್ವದ ಅತಿದೊಡ್ಡ ದ್ವೀಪ ಪ್ರದೇಶವಾಗಿರುವ ಈ ಗ್ರೀನ್​ಲ್ಯಾಂಡ್​ನಲ್ಲಿ ಆಗಸ್ಟ್ 14ರಂದು ಹಲವು ಗಂಟೆಗಳ ಕಾಲ ಭಾರಿ ಮಳೆ ಸುರಿದಿದೆ. ಈ ಮಳೆ ಮಂಜುಗಡ್ಡೆಯ ಮೇಲಿನ ಪದರಗಳನ್ನು ಬಹುಬೇಗ ಕರಗಿಸುತ್ತದೆ ಎಂಬುದು ಅಮೆರಿಕದ ಸ್ನೋ ಆ್ಯಂಡ್ ಐಸ್ ಡಾಟಾ ಸೆಂಟರ್ ವರದಿಯಲ್ಲಿನ ಗಂಭೀರ ವಿಚಾರ.

ಗ್ರೀನ್‌ ಲ್ಯಾಂಡ್ನಲ್ಲಿ ಹಿಮ ಕರಗುವಿಕೆ

ಈ ಮೂಲಕ ಜಗತ್ತಿನ ತಾಪಮಾನದಲ್ಲಿ ಬದಲಾವಣೆಯಾಗಲಿದ್ದು, ಈ ಬೆಳವಣಿಗೆ ಇನ್ನೂ ಕೆಲವು ವರ್ಷಗಳು ಮುಂದುವರೆದು ಜಗತ್ತಿನ ಹಲವು ರಾಷ್ಟ್ರಗಳ ಕರಾವಳಿ ನಗರಗಳು ಸಮುದ್ರದಲ್ಲಿ ಮುಳುಗಡೆಯಾಗುವುದು ಖಚಿತ ಎಂಬುದು ವಿಜ್ಞಾನಿಗಳ ಕಳವಳ.

ಮಳೆಗೂ, ತಾಪಮಾನ ಬದಲಾವಣೆಗೂ ಸಂಬಂಧವೇನು?

ಗ್ರೀನ್‌ಲ್ಯಾಂಡ್​ನಲ್ಲಿ ಆರ್ಕ್ಟಿಕ್ ಧ್ರುವದ ಸಮೀಪವಿರುವ ಕಾರಣದಿಂದ ಮಂಜಿನಿಂದ ಆವೃತವಾಗಿದೆ. ಭೂಮಿಯನ್ನು ತಂಪಾಗಿಡಲು ಆರ್ಕ್ಟಿಕ್ ಮತ್ತು ಅಂಟಾರ್ಟಿಕಾ ಖಂಡಗಳಷ್ಟೇ ಕೊಡುಗೆಯನ್ನು ಈ ಗ್ರೀನ್​ಲ್ಯಾಂಡ್​​ ನೀಡುತ್ತದೆ.

ಈಗ ಮಳೆ ಭಾರೀ ಮಳೆ ಸುರಿದ ಪರಿಣಾಮದಿಂದಾಗಿ ಗ್ರೀನ್​ಲ್ಯಾಂಡ್​​ನ ಮಂಜುಗಡ್ಡೆಯ ಮೇಲ್ಪದರಗಳು ಬಹುಬೇಗ ಕರಗಿ, ನೀರಾಗಿ, ಉತ್ತರ ಅಟ್ಲಾಂಟಿಕ್ ಸಮುದ್ರಕ್ಕೆ ಸೇರುತ್ತದೆ. ಸಾಕಷ್ಟು ಪ್ರಮಾಣದಲ್ಲಿ ನೀರು ಸಮುದ್ರಕ್ಕೆ ಬರುವುದರಿಂದ ಸಮುದ್ರದ ನೀರಿನ ಪ್ರಮಾಣವೂ ಹೆಚ್ಚಾಗುತ್ತದೆ. ಇದರಿಂದಾಗಿ ಸಮುದ್ರದಂಚಿನ ನಗರಗಳು ಮುಳುಗಡೆಯಾಗುವ ಸಾಧ್ಯತೆ ದಟ್ಟವಾಗಿರುತ್ತವೆ.

ಮಳೆ ಬಿದ್ದರೆ, ಮಂಜುಗಡ್ಡೆ ಕರಗುತ್ತದೆಯೇ?

ಪ್ರತಿವರ್ಷವೂ ಕೂಡಾ ಸಾಮಾನ್ಯ ತಾಪಮಾನದಲ್ಲಿ ಗ್ರೀನ್​​ಲ್ಯಾಂಡ್​ನ ಕರಗಿ, ಉತ್ತರ ಅಟ್ಲಾಂಟಿಕ್ ಸಮುದ್ರಕ್ಕೆ ಸೇರುವುದು ಸಾಮಾನ್ಯ ಪ್ರಕ್ರಿಯೆ. ಆದರೆ ಮಳೆಯ ಪ್ರಮಾಣ ಮಂಜುಗಡ್ಡೆ ಕರಗುವ ಪ್ರಮಾಣವನ್ನು ಹೆಚ್ಚಿಸುತ್ತದೆ. ಹೌದು, ನಂಬಲು ಅಸಾಧ್ಯವಾದರೆ, ಇದೊಂದು ಪ್ರಯೋಗವನ್ನು ನೀವೇ ಮಾಡಬಹುದು.

ನಿಮ್ಮ ಪ್ರಯೋಗ ಹೀಗಿರಲಿ...

ಎರಡು ಲೋಟಗಳನ್ನು ತೆಗೆದುಕೊಂಡು, ಒಂದು ಲೋಟದಲ್ಲಿ ನೀರು ತುಂಬಿ, ಅದರಲ್ಲಿ ಒಂದಷ್ಟು ಮಂಜುಗಡ್ಡೆಯನ್ನು ಸೇರಿಸಿ. ಮತ್ತೊಂದು ಲೋಟದಲ್ಲಿ ಕೇವಲ ಮಂಜುಗಡ್ಡೆಯನ್ನು ಮಾತ್ರ ತುಂಬಿ. ಸ್ವಲ್ಪ ಸಮಯ ನಂತರ ನೀರಿರುವ ಲೋಟದಲ್ಲಿ ಮಂಜುಗಡ್ಡೆ ತುಂಬಾ ವೇಗವಾಗಿ ಕರಗುತ್ತದೆ. ನೀರು ತುಂಬದ ಲೋಟದಲ್ಲಿ ಮಂಜುಗಡ್ಡೆ ನಿಧಾನವಾಗಿ ಕರಗುತ್ತದೆ. ಥೇಟ್ ಇದೇ ಸನ್ನಿವೇಶ ಗ್ರೀನ್​ಲ್ಯಾಂಡ್​​ನಲ್ಲಿ ಜರಗುತ್ತದೆ.

ಗ್ರೀನ್ ಲ್ಯಾಂಡ್ ಮತ್ತು ತಾಪಮಾನ ಬದಲಾವಣೆ: ಭಾರತಕ್ಕೂ ಎಚ್ಚರಿಕೆಯ ಕರೆಗಂಟೆ

  • ಗ್ರೀನ್ ಲ್ಯಾಂಡ್​ನಲ್ಲಿರುವ ಮಂಜುಗಡ್ಡೆ ಕರಗಿ ನೀರಾಗುವ ಕಾರಣದಿಂದ ಅಲ್ಲಿ ಮಂಜುಗಡ್ಡೆ ಖಾಲಿಯಾಗಿ ಕೇವಲ ಬರಡು ಪ್ರದೇಶಗಳು ಕಾಣಿಸಿಕೊಂಡರೂ ಕಾಣಿಸಿಕೊಳ್ಳಬಹುದು. ಇದರಿಂದ ಅಲ್ಲಿ ವಾಸವಿರುವ ಮಂಜುಗಡ್ಡೆಯ ಜೀವನಕ್ಕೆ ಹೊಂದಿಕೊಂಡಿರುವ ಪ್ರಾಣಿಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ.
  • ಭೂಮಿಯು ತಂಪು ಕಳೆದುಕೊಳ್ಳುವ ಕಾರಣದಿಂದ ಉಷ್ಣಾಂಶ ಹೆಚ್ಚಾಗಿ, ಭೂಮಿಯನ್ನು ತಂಪಾಗಿಡುವ ಉತ್ತರ ಮತ್ತು ದಕ್ಷಿಣ ಧ್ರುವ ಹಾಗೂ ಹಿಮಾಲಯ ಪರ್ವತಗಳು ಕೂಡಾ ಅತ್ಯಂತ ಬೇಗ ಕರಗುವ ಪ್ರಕ್ರಿಯೆಗೆ ಚಾಲನೆ ಸಿಗಬಹುದು.
  • ಒಟ್ಟು ಗ್ರೀನ್‌ಲ್ಯಾಂಡ್ ಕರಗಿದರೆ ಸುಮಾರು 20 ಅಡಿ ಸಮುದ್ರದ ನೀರಿನ ಮಟ್ಟ ಹೆಚ್ಚಾಗಿ ಹಲವು ರಾಷ್ಟ್ರಗಳ ಪ್ರಮುಖ ನಗರಗಳು ನೀರಿನಲ್ಲಿ ಮುಳುಗಡೆಯಾಗಬಹುದು. ಭಾರತದ ಕರಾವಳಿಯ ನಗರಗಳೂ ಇದಕ್ಕೆ ಹೊರತಲ್ಲ ಎಂಬುದು ವಿಜ್ಞಾನಿಗಳ ಎಚ್ಚರಿಕೆಯ ನುಡಿ.
  • ಈಗಾಗಲೇ ಜಾಗತಿಕ ತಾಪಮಾನ ಏರಿಕೆ ಕಾರಣದಿಂದ ಅನೇಕ ಪರಿಣಾಮಗಳನ್ನು ಭೂಮಿ ಎದುರಿಸುತ್ತಿದೆ. ಈಗ ಗ್ರೀನ್ ಲ್ಯಾಂಡ್​ನ ಮಂಜುಗಡ್ಡೆಯ ಕರಗುವ ಪ್ರಕ್ರಿಯೆ, ಜಾಗತಿಕ ತಾಪಮಾನ ಏರಿಕೆಯನ್ನು ಮತ್ತಷ್ಟು ತೀವ್ರಗೊಳಿಸಬಹುದು.

ಪರಿಹಾರವೇನು?

ಈಗ ವಿಜ್ಞಾನಿಗಳ ಚಿತ್ತ ಗ್ರೀನ್​ಲ್ಯಾಂಡ್​ನತ್ತ ಇದ್ದು, ಮಳೆ ಬೀಳುವಂಥ ಸ್ವಾಭಾವಿಕ ಪ್ರಕ್ರಿಯೆಯನ್ನು ತಡೆಯಲು ಅಸಾಧ್ಯ ಎಂಬುದು ಎಲ್ಲರ ಅರಿವಿಗೆ ಬಂದಿದೆ. ಆದರೆ ಬಯಲು ಕಾಡುಗಳನ್ನು ಬೆಳಸುವ ಮೂಲಕ ಮಳೆಯನ್ನು ಇಲ್ಲಿಯೇ ಆಕರ್ಷಿಸಬಹುದಾಗಿದ್ದು, ಕಾಡಿನ ನಾಶವನ್ನು ಕಡಿಮೆ ಮಾಡಿದರೆ, ಗ್ರೀನ್​​ಲ್ಯಾಂಡ್​ನ ಮಂಜುಗಡ್ಡೆ ಸವೆತವನ್ನು ತಪ್ಪಿಸಬಹುದಾಗಿದೆ.

ಇದನ್ನೂ ಓದಿ:ಬಿಸಿ ಗಾಳಿಯಿಂದ ಭಾರೀ ಹಿಮಪಾತಕ್ಕೆ ಸಾಕ್ಷಿಯಾದ ವಿಶ್ವದ ಅತಿದೊಡ್ಡ ದ್ವೀಪರಾಷ್ಟ್ರ!

ABOUT THE AUTHOR

...view details