ವಾಷಿಂಗ್ಟನ್: ತಮ್ಮ ದೇಶದ ಕಣ್ಗಾವಲು ಡ್ರೋನ್ ಅನ್ನು ಹೊಡೆದುರುಳಿಸಿದ ತಕ್ಷಣವೇ ಇರಾನ್ ಮೇಲೆ ಪ್ರತೀಕಾರದ ದಾಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿ ನಂತರ ದಾಳಿಯನ್ನು ತಡೆಹಿಡಿದಿದ್ದರು ಎನ್ನುವ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಇರಾನ್ ಮೇಲೆ ಸುಸಜ್ಜಿತ ಮಿಲಿಟರಿ ದಾಳಿ ನಡೆಸಲು ಡೊನಾಲ್ಡ್ ಟ್ರಂಪ್ ಆದೇಶ ನೀಡಿದ್ದರು. ಆದರೆ ದಾಳಿಗೂ ಕೆಲವೇ ಗಂಟೆಗಳ ಮುನ್ನ ದಾಳಿ ನಡೆಸದಂತೆ ಟ್ರಂಪ್ ಮರು ಆದೇಶ ನೀಡಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಿಕೆ ವರದಿ ಮಾಡಿದೆ.
ಟ್ರಂಪ್ ದಾಳಿಗೆ ಆದೇಶಿಸಿದ ತಕ್ಷಣವೇ ಯುದ್ಧ ಹಡಗು ಹಾಗೂ ಯುದ್ಧ ವಿಮಾನವನ್ನು ದಾಳಿಗೆ ನಿಯೋಜನೆ ಮಾಡಲಾಗಿತ್ತು. ಆದರೆ ಗುರುವಾರ ರಾತ್ರಿ ದಾಳಿ ನಡೆಸದಂತೆ ಮತ್ತೊಂದು ಆದೇಶ ಹೊರಬಂದಿದೆ. ಸ್ವತಃ ಅಧ್ಯಕ್ಷರೇ ದಾಳಿ ನಡೆಸದಂತೆ ಸೂಚಿಸಿದ್ದಾರೋ ಅಥವಾ ಆಡಳಿತ ವರ್ಗ ಈ ಸೂಚನೆ ನೀಡಿದೆಯೋ ಎನ್ನುವ ಬಗ್ಗೆ ಸ್ಪಷ್ಟ ಚಿತ್ರಣ ದೊರೆತಿಲ್ಲ.
ಇರಾನ್ ಹಾಗೂ ಅಮೆರಿಕ ನಡುವಿನ ವಾಕ್ಸಮರ ಕಳೆದೊಂದು ತಿಂಗಳಿನಿಂದ ತೀವ್ರವಾಗಿದ್ದು ಇದಕ್ಕೆ ಪೂರಕ ಎನ್ನುವಂತೆ ಇದೀಗ ಕೆಲ ದಿನದ ಹಿಂದೆ ಇರಾನ್ ಅಮೆರಿಕ ದೇಶಕ್ಕೆ ಸೇರಿದ ಕಣ್ಗಾವಲು ಡ್ರೋನ್ ಹೊಡೆದುರುಳಿಸಿತ್ತು. ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಟ್ರಂಪ್, ಇರಾನ್ ಅತ್ಯಂತ ದೊಡ್ಡ ತಪ್ಪೆಸಗಿದೆ ಎಂದು ಟ್ವೀಟ್ ಮಾಡಿದ್ದರು.
ಕಣ್ಗಾವಲು ಡ್ರೋನ್ ಸಮುದ್ರದ ಮೇಲ್ಭಾಗದಲ್ಲಿ ಹಾರಾಡುವ ವೇಳೆ ಇರಾನ್ ಹೊಡೆದುರುಳಿಸಿದೆ ಎಂದ ಘಟನೆಯ ಬಳಿಕ ಅಮೆರಿಕ ಫೋಟೋ ಸಮೇತ ಪ್ರಕಟಣೆ ಹೊರಡಿಸಿತ್ತು. ಇದಕ್ಕೆ ಪ್ರತಿಯಾಗಿ ಫೋಟೋ ಪ್ರಕಟಣೆ ಬಿಡುಗಡೆ ಮಾಡಿದ್ದ ಇರಾನ್, ಡ್ರೋನ್ ನಮ್ಮ ದೇಶದ ವಾಯುಮಾರ್ಗ ಪ್ರವೇಶಿಸಿತ್ತು ಎಂದಿದೆ.