ಕೊಲಂಬಿಯಾ: ತಾಯ್ತನ ಎಂಬುದು ಅವರ್ಣನೀಯ ಅನುಭವ. ಅದನ್ನು ಅನುಭವಿಸಿಯೇ ತಿಳಿಯಬೇಕು. ಮಗುವಿಗೆ ಜನ್ಮ ನೀಡಿ ಅದನ್ನು ಬೆಳೆಸುವ ಪ್ರಕ್ರಿಯೆ ಕುತೂಹಲ, ಖುಷಿಯ ವಿಷಯ. ಆದರೆ ನಾವು ಹೇಳಲು ಹೊರಟಿರುವುದು ಸ್ವಲ್ಪ ವಿಭಿನ್ನ, ಕುತೂಹಲಕಾರಿ ಸ್ಟೋರಿ. ಕೊಲಂಬಿಯಾದ ಟ್ರಾನ್ಸ್ಜೆಂಡರ್ವೊಬ್ಬರು ಸದ್ಯದಲ್ಲೇ ತಾಯಿಯಾಗಲಿದ್ದಾರೆ. ಹೌದು, ಇದು ವಿಚಿತ್ರ ಎನಿಸಿದರೂ ಸತ್ಯ.
ಟ್ರಾನ್ಸ್ಜೆಂಡರ್ ಮಾಡೆಲ್ವೊಬ್ಬರು 'ಗರ್ಭಿಣಿ'ಯಾಗಿರುವ ತನ್ನ ಗಂಡನ ಹೊಟ್ಟೆಗೆ ಖುಷಿಯಿಂದ ಮುತ್ತು ನೀಡುವ ಹೃದಯಸ್ಪರ್ಶಿ ಫೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿದ್ದಾರೆ. ಅಂದ ಹಾಗೆ ಟ್ರಾನ್ಸ್ಜೆಂಡರ್ ಆಗಿರುವ ಈ ವ್ಯಕ್ತಿಗೆ ಈಗ 8 ತಿಂಗಳು.
ಡನ್ನಾ ಸುಲ್ತಾನಾ ಪತಿ ಎಸ್ಟೆಬಿನ್ ಲಾಂಡ್ರ್ಯೂ
ಡನ್ನಾ ಸುಲ್ತಾನಾ ಮತ್ತು ಈಸ್ಟ್ಬನ್ ಲಾಂಡ್ರೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿರುವ ಜೋಡಿ. ಗಂಡಾಗಿ ಹುಟ್ಟಿ ನಂತರ ಹೆಣ್ಣಾಗಿ ಗುರುತಿಸಿಕೊಂಡವರು ಡನ್ನಾ ಸುಲ್ತಾನಾ. ಮಾಡೆಲ್ ಆಗಿರುವ ಡನ್ನಾ ಸುಲ್ತಾನಾ ಅವರೇ ಈಗ ಮಗುವಿನ ನಿರೀಕ್ಷೆಯಲ್ಲಿರೋದು. ಆದರೆ ತಾಯ್ತನದ ಖುಷಿ ಅನುಭವಿಸುತ್ತಿರುವುದು ಡನ್ನಾ ಅಲ್ಲ. ಬದಲಾಗಿ ಈಕೆಯ ಗಂಡ ಈಸ್ಟ್ಬಸ್ ಲಾಂಡ್ರೋ. ಹೌದು, ಜನಿಸಿದಾಗ ಹೆಣ್ಣಾಗಿದ್ದು ನಂತರ ಲಿಂಗಪರಿವರ್ತನೆ ಮಾಡಿಸಿಕೊಂಡಿದ್ದ ಈಸ್ಟ್ಬನ್ ಲಾಂಡ್ರೋ ತಾಯ್ತನದ ಎಲ್ಲ ಖುಷಿಯನ್ನು ಅನುಭವಿಸುತ್ತಿದ್ದಾರೆ.
'ಗರ್ಭಿಣಿ' ಪತಿಯೊಂದಿಗೆ ಡನ್ನಾ ಸುಲ್ತಾನಾ
2 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇರುವ ತಮ್ಮ ಇನ್ಸ್ಟಾಗ್ರಾಂನಲ್ಲಿ ಮಾಡೆಲ್ ಡನ್ನಾ ಸುಲ್ತಾನಾ ಹೃದಯ ತಟ್ಟುವ ಫೋಟೊವನ್ನು ಹಂಚಿಕೊಂಡಿದ್ದಾರೆ. 'Love Is Love' ಎಂಬ ಹ್ಯಾಶ್ಟ್ಯಾಗ್ನಿಂದ ಈ ಖುಷಿಯ ವಿಷಯವನ್ನು ಡನ್ನಾ ಶೇರ್ ಮಾಡಿದ್ದಾರೆ. ಮತ್ತೊಂದು ಕುತೂಹಲಕಾರಿ ವಿಚಾರ ಏನೆಂದರೆ ಈಸ್ಟ್ಬನ್ ಲಾಂಡ್ರೋ ಸಹಜ ರೀತಿಯಲ್ಲೇ ಗರ್ಭ ಧರಿಸಿದ್ದಾರೆ ಅನ್ನೋದು.
8 ತಿಂಗಳಾಗುತ್ತಿದ್ದಂತೆ ಈಸ್ಟ್ಬನ್ ಅವರನ್ನು ಡನ್ನಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಗರ್ಭದಲ್ಲಿರುವ ಮಗುವಿನ ಗಾತ್ರ ಸ್ವಲ್ಪ ದೊಡ್ಡದಿದೆ. ನೀವು ಆತಂಕಪಡಬೇಕಿಲ್ಲ ಎಂದು ಈ ಜೋಡಿಗೆ ವೈದ್ಯರು ಧೈರ್ಯ ಹೇಳಿದ್ದಾರೆ. ಮನೆಗೆ ಮರಳಿರುವ ಈ ಜೋಡಿ ಈಗ ಖುಷಿಯ ದಿನಕ್ಕಾಗಿ ಕಾಯುತ್ತಿದೆ. ತಮ್ಮ ಕುಟುಂಬ ಸದಸ್ಯರಿಗೂ ಈ ವಿಚಾರ ತಿಳಿಸಿರುವ ಡನ್ನಾ ಮತ್ತು ಈಸ್ಟ್ಬನ್ ಪುಟ್ಟ ಕಂದನ ಸ್ವಾಗತಕ್ಕೆ ಸಜ್ಜಾಗಿ ಎಂದು ಹೇಳಿದ್ದಾರೆ. ಹುಟ್ಟುವ ಗಂಡು ಮಗುವಿಗೆ ಈಗಾಗಲೇ ಹೆಸರನ್ನೂ ಇಟ್ಟಿದ್ದಾರೆ. ನಾವು ಮಗನನ್ನು 'ಏರಿಯಲ್' ಎಂದು ಕರೆಯುತ್ತೇವೆ ಎಂದು ಹೇಳಿಕೊಂಡಿದ್ದಾರೆ. ಈ ಇಬ್ಬರ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿವೆ.