ವಾಷಿಂಗ್ಟನ್: ಕ್ಯಾಪಿಟಲ್‌ನಲ್ಲಿ ದಂಗೆಯನ್ನು ಪ್ರಚೋದಿಸಿದ್ದಕ್ಕಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುಎಸ್ ಹೌಸ್ನಿಂದ ದೋಷಾರೋಪಣೆಗೆ ಒಳಗಾಗಿದ್ದಾರೆ.
ಎರಡನೇ ಬಾರಿಗೆ ದೋಷಾರೋಪಣೆಗೆ ಗುರಿಯಾದ ಟ್ರಂಪ್!
ಇತಿಹಾಸದಲ್ಲಿ ಎರಡು ಬಾರಿ ದೋಷಾರೋಪಣೆಗೆ ಒಳಗಾದ ಮೊದಲನೇ ಯುಎಸ್ ಅಧ್ಯಕ್ಷ ಟ್ರಂಪ್ ಆಗಲಿದ್ದಾರೆ.
ಟ್ರಂಪ್ ವಿರುದ್ಧದ ದೋಷಾರೋಪಣೆ ನಿರ್ಣಯವನ್ನು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅಂಗೀಕರಿಸಿದೆ. ಈ ನಿರ್ಣಯವು 232-197 ಮತಗಳ ಅಂತರದಿಂದ ಗೆದ್ದಿದೆ. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ನಿರ್ಣಯವನ್ನು ಅಂಗೀಕರಿಸುವುದರೊಂದಿಗೆ ಎರಡು ದೋಷಾರೋಪಣೆಗಳನ್ನು ಎದುರಿಸಿದ ಮೊದಲ ಯು.ಎಸ್. ಅಧ್ಯಕ್ಷರಾಗಿ ಟ್ರಂಪ್ ಇತಿಹಾಸದಲ್ಲಿ ಉಳಿಯಲಿದ್ದಾರೆ. ಟ್ರಂಪ್ ಅವರನ್ನು ಅಧಿಕಾರದಿಂದ ತೆಗೆದುಹಾಕಲು ಯುಎಸ್ ಸೆನೆಟ್ ಈ ನಿರ್ಣಯವನ್ನು ಅಂಗೀಕರಿಸಬೇಕಾಗಿತ್ತು. ಹಾಗೆ 10 ರಿಪಬ್ಲಿಕನ್ ಸದಸ್ಯರು ಇದಕ್ಕೆ ಬೆಂಬಲ ಕೂಡ ನೀಡಿದ್ದಾರೆ. ಸೆನೆಟ್ ಈ ಸಂಬಂಧ ಮುಂದಿನ ವಿಚಾರಣೆ ನಡೆಸಲಿದೆ.
ಟ್ರಂಪ್ ವಿರುದ್ಧ ಡೆಮೋಕ್ರಾಟಿಕ್ ಮಂಡಿಸಿದ್ದ ದೋಷಾರೋಪಣೆ ನಿರ್ಣಯದ ಕುರಿತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ ಚಲಾಯಿಸುವ ಪ್ರಕ್ರಿಯೆ ನಡೆಸಿತು. ನಿರ್ಣಯದ ಕುರಿತ ಚರ್ಚೆಯ ಸಂದರ್ಭದಲ್ಲಿ, ಸ್ಪೀಕರ್ ಪೆಲೋಸಿ, ಜನವರಿ 7 ರಂದು ಕ್ಯಾಪಿಟಲ್ ಕಟ್ಟಡದಲ್ಲಿ ನಡೆದ ಹಿಂಸಾಚಾರಕ್ಕೆ ಟ್ರಂಪ್ ಕಾರಣ ಎಂದು ಎಲ್ಲರಿಗೂ ತಿಳಿದಿದೆ ಮತ್ತು ಅವರು ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಹೇಳಿದರು. ನಂತರ ತಮ್ಮದೇ ಪಕ್ಷದ ಕೆಲ ಸದಸ್ಯರು ಟ್ರಂಪ್ ವಿರುದ್ಧ ದೋಷಾರೋಪಣೆ ನಿರ್ಣಯದ ಪರವಾಗಿ ಮತ ಚಲಾಯಿಸುವುದಾಗಿ ಹೇಳಿದರು.