ವಿಲ್ಮಿಂಗ್ಟನ್:ಅಮೆರಿಕಾ ಚುನಾಯಿತ ಅಧ್ಯಕ್ಷ ಜೋ ಬೈಡನ್ರವರ ಸಂವಹನ ತಂಡಕ್ಕೆ ಎಲ್ಲ ಅನುಭವಿ ಮಹಿಳೆಯರನ್ನೇ ಆಯ್ಕೆಮಾಡಿದ್ದು, ಪ್ರಚಾರ ಸಂವಹನ ನಿರ್ದೇಶಕರಾದ ಕೇಟ್ ಬೆಡಿಂಗ್‌ಫೀಲ್ಡ್ ಈ ತಂಡದ ನೇತೃತ್ವ ವಹಿಸಲಿದ್ದಾರೆ.
ಬೆಡಿಂಗ್ಫೀಲ್ಡ್ ಬಿಡೆನ್‌ನ ಶ್ವೇತಭವನದ ಸಂವಹನ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದು, ದೀರ್ಘಕಾಲದ ಡೆಮಾಕ್ರಟಿಕ್ ವಕ್ತಾರರಾದ ಜೆನ್ ಸಾಕಿ ಬೈಡನ್ ಅವರ ಪತ್ರಿಕಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಸಾಕಿ ಈಗಾಗಲೇ ಬೈಡನ್ ಅವರ ತಂಡದೊಂದಿಗೆ ಕೆಲಸ ಮಾಡುತ್ತಿದ್ದಾರೆ, ಪರಿವರ್ತನೆಯ ಮುಖ್ಯ ವಕ್ತಾರರಲ್ಲಿ ಒಬ್ಬರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಡಿಂಗ್ಫೀಲ್ಡ್ ಮತ್ತು ಸಾಕಿ ಇಬ್ಬರೂ ಯುಎಸ್ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಕಾಲದ ಆಡಳಿತದ ಅನುಭವಿಗಳಾಗಿದ್ದಾರೆ.
ಅಮೆರಿಕದ ಜನರಿಗೆ ನೇರವಾಗಿ ಮತ್ತು ಸತ್ಯವನ್ನೇ ತಿಳಿಸುವುದು ಅಧ್ಯಕ್ಷರ ಪ್ರಮುಖ ಕರ್ತವ್ಯಗಳಲ್ಲಿ ಒಂದಾಗಿದೆ ಮತ್ತು ಅಮೆರಿಕದ ಜನರನ್ನು ಶ್ವೇತಭವನಕ್ಕೆ ಸಂಪರ್ಕಿಸುವ ಮಹತ್ತರವಾದ ಜವಾಬ್ದಾರಿಯನ್ನು ಈ ತಂಡಕ್ಕೆ ವಹಿಸಲಾಗುವುದು ಎಂದು ಬೈಡನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಅರ್ಹ, ಅನುಭವಿ ಸಂವಹನಕಾರರು ತಮ್ಮ ಕೆಲಸದಲ್ಲಿ ವೈವಿಧ್ಯಮಯ ದೃಷ್ಟಿಕೋನಗಳನ್ನು ಹೊಂದಿದ್ದು, ಈ ದೇಶವನ್ನು ಉತ್ತಮವಾಗಿ ಮರು ನಿರ್ಮಿಸುವ ಬದ್ಧತೆಯನ್ನು ಹೊಂದಿದ್ದಾರೆ ಎಂದು ಅಮೆರಿಕ ಚುನಾಯಿತ ಅಧ್ಯಕ್ಷ ಬೈಡನ್ ಹೇಳಿದ್ದಾರೆ.
ಇನ್ನು ಯುಎಸ್ನ ಉಪಾಧ್ಯಕ್ಷೆಯಾಗಿ ಚುನಾಯಿತರಾದ ಕಮಲಾ ಹ್ಯಾರಿಸ್ ಅವರ ಮುಖ್ಯಸ್ಥರಾಗಿರುವ ಕರೀನ್ ಜೀನ್ ಪಿಯರೆ ಅವರು ಅಧ್ಯಕ್ಷರಾಗಿ ಆಯ್ಕೆಯಾದವರಿಗೆ ಪ್ರಧಾನ ಉಪ ಪತ್ರಿಕಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಬೈಡನ್ ಅವರ ಅಭಿಯಾನದಲ್ಲಿ ಒಕ್ಕೂಟಗಳಿಗೆ ಸಂವಹನ ನಿರ್ದೇಶಕರಾಗಿದ್ದ ಪಿಲಿ ಟೋಬರ್ ಉಪ ವೈಟ್ಹೌಸ್ ಸಂವಹನ ನಿರ್ದೇಶಕರಾಗಲಿದ್ದಾರೆ.