ಬೆಂಗಳೂರು: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಧಾರ ರಹಿತವಾದ ಆರೋಪವನ್ನು ಕಾಂಗ್ರೆಸ್ ಪಕ್ಷದ ಮೇಲೆ ಮಾಡಿದ್ದಾರೆ ಎಂದು ಆರೋಪಿಸಿ ವಸಂತನಗರ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ದೂರು ಸಲ್ಲಿಕೆಯಾಗಿದೆ. ಅಷ್ಟೇ ಅಲ್ಲದೆ, ಕೂಡಲೇ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕೆಂದು ಒತ್ತಾಯಿಸಲಾಗಿದೆ.
“ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕರ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಕಾಂಗ್ರೆಸ್ ಪಕ್ಷದ ವಿರುದ್ಧ ಆಧಾರ ರಹಿತವಾದ ಆರೋಪವನ್ನು ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಜನರ ದಾರಿ ತಪ್ಪಿಸುತ್ತಿದ್ದು, ಜನರ ಜೀವಗಳಿಗೆ ಯಮನಂತಾಗಿದೆ. ದೇಶ ಮತ್ತು ವಿದೇಶಗಳಲ್ಲಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡಲು ಟೂಲ್ ಕಿಟ್ ರೂಪಿಸಿದೆ ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ” ಎಂದು ಹೇಳಿ ದೂರು ನೀಡಿದ್ದಾರೆ.
ಹನುಮಂತನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ದೂರು ಸಲ್ಲಿಸಿದ ತೇಜಸ್ ಕುಮಾರ್ ಮಾತನಾಡಿ, “ಇಡೀ ದೇಶವೇ ಕೊರೊನಾದಿಂದ ನರಳುತ್ತಿರುವ ಸಂದರ್ಭದಲ್ಲಿ ಜನರಿಗೆ ತಪ್ಪು ಸಂದೇಶವನ್ನು ರವಾನಿಸಿ, ಜನರಲ್ಲಿ ಭಯ ಭೀತಿ ಉಂಟು ಮಾಡುವ ಹೇಳಿಕೆಯ ವಿರುದ್ಧ ದೂರು ಸಲ್ಲಿಸಿದ್ದೇವೆ. ಕೂಡಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಕೊರೊನ ಪೀಡಿತರಿಗೆ ಆಸ್ಪತ್ರೆಗಳಲ್ಲ, ಬೆಡ್ ಬ್ಲಾಕ್ ಮಾಡಿ ಬೇರೆಯವರಿಗೆ ನೀಡುತ್ತಿದ್ದಾರೆಂದು ಸಿ.ಟಿ. ರವಿ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ನೀಡಿದ್ದರು. ಈ ರೀತಿಯ ಹೇಳಿಕೆಗಳು ಸಮಾಜಕ್ಕೆ ತಪ್ಪು ಸಂದೇಶವನ್ನು ನೀಡುವುದಲ್ಲದೆ ಇದೊಂದು ಕ್ರಿಮಿನಲ್ ಹೇಳಿಕೆ ಹಾಗೂ ಪ್ರಚೋದನಾಕಾರಿ ಹೇಳಿಕೆಯಾಗಿದೆ. ಕೂಡಲೇ ಸಿ ಟಿ ರವಿ ಹಾಗೂ ತೇಜಸ್ವಿ ಸೂರ್ಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಬೇಕೆಂದು ಎಂದು ತೇಜಸ್ ಕುಮಾರ್ ಒತ್ತಾಯಿಸಿದ್ದಾರೆ.