ವಿಶ್ವದಾದ್ಯಂತ ಮೂಲೆ ಮೂಲೆಯಲ್ಲಿ ಎನ್‌ಎಫ್‌ಟಿ ಬಗ್ಗೆ ಚರ್ಚೆಯಾಗುತ್ತಿದೆ. ಅದರಲ್ಲಿಯೂ ಸಿನಿಮಾ ರಂಗವು ಎನ್‌ಎಫ್‌ಟಿ ಎಂಬ ಡಿಜಿಟಲ್ ವರ್ಲ್ಡ್ ಅನ್ನು ಬೇರೆ ಬೇರೆ ರೀತಿಯನ್ನು ಬಳಸಿಕೊಳ್ಳುತ್ತಿದೆ. ಈ ಹಿಂದೆ 'ಕೆಜಿಎಫ್ ಚಾಪ್ಟರ್-2' ಸಿನಿಮಾ ಕೂಡ ಎನ್‌ಎಫ್‌ಟಿಯನ್ನು ಬೇರೆ ರೀತಿಯೇ ಬಳಸಿಕೊಂಡಿತ್ತು. ಈಗ ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಚಿತ್ರತಂಡ ಕೂಡ ಹೊಸತನಕ್ಕೆ ಸಾಕ್ಷಿಯಾಗುತ್ತಿದೆ.
ಸದ್ಯ ಬ್ಲಾಕ್ ಚೈನ್ ಆಧಾರಿತ ಟಿಕೆಟಿಂಗ್ ಪ್ಲಾಟ್‌ಫಾರ್ಮ್ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾದ 3D ಎನ್‌ಎಫ್‌ಟಿ ಪ್ರೀಮಿಯರ್ ಸದಸ್ಯತ್ವವನ್ನು ಪ್ರಾರಂಭಿಸುತ್ತಿದೆ. ಪ್ರಿಯಾ ಸುದೀಪ್ ಅವರು ಪ್ರಾರಂಭಿಸಿದ ಜಾಗತಿಕ ಹೂಡಿಕೆಯ ಕಂಪನಿ 'ಕಾಫಿ ಆ್ಯಂಡ್ ಬನ್ ಇನ್ನೊವೇಷನ್' ಎನ್‌ಎಫ್‌ಟಿ ಟಿಕೆಟಿಂಗ್ ಹಕ್ಕುಗಳನ್ನು ಬ್ಲಾಕ್ ಟಿಕೆಟ್ಸ್ಗೆ ನೀಡಿರುವುದನ್ನು ದೃಢಪಡಿಸಿದೆ.
ಕಾಫಿ ಆ್ಯಂಡ್ ಬನ್ ಇನ್ನೊವೇಷನ್ ಗ್ರೂಪ್ ಸಿಇಓ ಝಾಕಿರ್ ಹುಸೇನ್ ಕರೀಂಖಾನ್ ಈ ಕುರಿತು ಮಾತನಾಡಿ, ಇತರೆ ಪ್ಲಾಟ್ಫಾರ್ಮ್ಗಳಿಗೆ ಹೋಲಿಸಿದರೆ ಬ್ಲಾಕ್ ಟಿಕೆಟ್ಸ್ ತಾಂತ್ರಿಕ ಔನ್ನತ್ಯವು ಈ ಚಿತ್ರಕ್ಕೆ ಟಿಕೆಟಿಂಗ್ ಪ್ಲಾಟ್‌ಫಾರ್ಮ್ ಆಗಿ ಆಯ್ಕೆ ಮಾಡಿಕೊಳ್ಳಲು ಸಹಾಯವಾಗಲಿದೆ ಎಂದರು.
ಈ ಬಗ್ಗೆ ಮಾತನಾಡಿ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಮಾತನಾಡಿ, ಮನರಂಜನೆಯ ಉದ್ಯಮಕ್ಕೆ ಅದರಲ್ಲಿಯೂ ಚಲನಚಿತ್ರ ವಹಿವಾಟಿಗೆ ಕೋವಿಡ್ ಅವಧಿ ಬಹಳ ಕಠಿಣವಾಗಿತ್ತು. ಉದ್ಯಮವು ಮತ್ತೆ ಯಥಾಸ್ಥಿತಿಗೆ ಮರಳುತ್ತಿರುವಾಗ ಎನ್‌ಎಫ್‌ಟಿ ಟಿಕೆಟಿಂಗ್ ಅಭಿಮಾನಿಗಳ ಸಕ್ರಿಯತೆಯನ್ನು ಹೆಚ್ಚಿಸುವ ವಿಧಾನವಾಗಿದೆ. ಅವರಿಗೆ ಚಲನಚಿತ್ರದ ಇತಿಹಾಸದಲ್ಲಿ ತಮ್ಮದೇ ಆದ ಭಾಗವನ್ನು ಹೊಂದಲು ಅವಕಾಶ ನೀಡುತ್ತಿದೆ. ವಿಸ್ತರಿಸುತ್ತಿರುವ ಮೆಟಾವರ್ಸ್ ಮತ್ತು ಎನ್ಎಫ್ಟಿಗಳ ಜಗತ್ತನ್ನು ಆವಿಷ್ಕರಿಸಲು ನಾವು ಬಹಳ ಉತ್ಸುಕರಾಗಿದ್ದೇವೆ ಎಂದು ಹೇಳಿದರು.
ಎನ್.ಎಫ್.ಟಿ ಪ್ರೀಮಿಯರ್ ಸದಸ್ಯತ್ವ ಅನಾವರಣ ಕಿಚ್ಚ ಸುದೀಪ್ ಮಾತನಾಡಿ, ನಮಗೆ ಸದಾ ದೊಡ್ಡ ಆಲೋಚನೆ, ದೊಡ್ಡ ಚಿಂತನೆ ಇತ್ತು. ಚಲನಚಿತ್ರವೊಂದಕ್ಕೆ ವಿಶ್ವದ ಮೊದಲ ಎನ್‌ಎಫ್‌ಟಿ ಪ್ರೀಮಿಯರ್ ಸದಸ್ಯತ್ವ ಬಿಡುಗಡೆ ಮಾಡುವುದು ಹೊಸ, ಹೆಚ್ಚು ಸಂವಹನಪೂರ್ವಕ ಮತ್ತು ಸಕ್ರಿಯಗೊಳಿಸುವ ಅನುಭವವನ್ನು ನಮ್ಮ ಅಭಿಮಾನಿಗಳಿಗೆ ತರಲು ನೆರವಾಗಿದೆ. ಅಭಿಮಾನಿಗಳು ಈ ಅನುಭವವನ್ನು ದೀರ್ಘಕಾಲ ನೆನಪಿನಲ್ಲಿ ಇರಿಸಿಕೊಳ್ಳಬೇಕು ಎನ್ನುವುದು ನನ್ನ ಬಯಕೆ. ವಿಶ್ವದಲ್ಲಿ ಮೊಟ್ಟಮೊದಲ ಬಾರಿಗೆ ಬ್ಲಾಕ್ ಟಿಕೆಟ್ಸ್ ಜೊತೆಯಲ್ಲಿ ಸಹಯೋಗಕ್ಕೆ ನಾವು ಬಹಳ ಉತ್ಸುಕರಾಗಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.
ವಿಕ್ರಾಂತ್ ರೋಣ ಫ್ಯಾಂಟಸಿ ಆ್ಯಕ್ಷನ್-ಸಾಹಸದ ಥ್ರಿಲ್ಲರ್ ಚಿತ್ರವಾಗಿದ್ದು, ಅನೂಪ್ ಭಂಡಾರಿ ರಚಿಸಿ, ನಿರ್ದೇಶಿಸಿದ್ದಾರೆ. ಜು.26, 2022ರಂದು ಈ ಪ್ರೀಮಿಯರ್ ಕಾರ್ಯಕ್ರಮ ನಡೆಸಲಾಗುತ್ತದೆ. ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್, ನಿರೂಪ್ ಭಂಡಾರಿ, ನೀತಾ ಅಶೋಕ್, ರವಿಶಂಕರ್ ಗೌಡ ಮತ್ತು ವಾಸುಕಿ ವೈಭವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರ ಜು.28ರಂದು ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.
ವಿಶ್ವದಲ್ಲಿಯೇ ಮೊದಲ ಬಾರಿಗೆ ಚಲನಚಿತ್ರ ತನ್ನ ಪ್ರೀಮಿಯರ್ ಟಿಕೆಟ್ ಮತ್ತು ಸದಸ್ಯತ್ವಗಳನ್ನು ಎನ್ಎಫ್ಟಿಗಳಾಗಿ ಬಿಡುಗಡೆ ಮಾಡುತ್ತಿರುವುದಾಗಿದೆ. ಅಭಿಮಾನಿಗಳು ಸಿಲ್ವರ್, ಗೋಲ್ಡ್, ಪ್ಲಾಟಿನಂ ಮತ್ತು ಡೈಮಂಡ್ ಎನ್‌ಎಫ್‌ಟಿ ಸದಸ್ಯತ್ವಗಳನ್ನು ಪಡೆಯುವುದಲ್ಲದೆ ಪ್ರೀಮಿಯರ್ ಕಾರ್ಯಕ್ರಮದಲ್ಲಿ ರೆಡ್-ಕಾರ್ಪೆಟ್ ಪ್ರವೇಶ, ಚಲನಚಿತ್ರದ ಎನ್‌ಎಫ್‌ಟಿ ಲೋಗೋ, ವಿಶೇಷವಾದ ಪಾರ್ಟಿ ಆಹ್ವಾನಗಳು, ಮುಂಚೂಣಿಯ ನಟರೊಂದಿಗೆ ಛಾಯಾಚಿತ್ರಗಳ ಅವಕಾಶಗಳು ಮತ್ತು ತಾರೆಯರೊಂದಿಗೆ ನೇರ ಸಂವಹನದ ಅವಕಾಶ ಹೊಂದುತ್ತಾರೆ.
ಇದನ್ನೂ ಓದಿ:ಓವರ್ ಸೀಸ್ ಮಾರುಕಟ್ಟೆಯಲ್ಲಿ ದಾಖಲೆ ಬರೆದ 'ವಿಕ್ರಾಂತ್ ರೋಣ'