ಕನ್ನಡದ 'ಬಿಗ್ ಬಾಸ್' ರಿಯಾಲಿಟಿ ಶೋ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸ್ನೇಹಿತರಾಗಿದ್ದ ಸ್ಪರ್ಧಿಗಳು ಶತ್ರುಗಳಾದ್ರೆ, ಯಾವಾಗಲೂ ಕಿತ್ತಾಡುತ್ತಿದ್ದವರು ದಿಢೀರ್ ಫ್ರೆಂಡ್ಸ್ ಆಗಿದ್ದಾರೆ. ಸದ್ಯ ಮನೆ ಮಂದಿಯೆಲ್ಲಾ ಸೇರಿ ಸಂಗೀತಾ ಒಬ್ಬರನ್ನೇ ಟಾರ್ಗೆಟ್ ಮಾಡುತ್ತಿರುವಂತಿದೆ. ಇದಕ್ಕೆ ಉದಾಹರಣೆ ಎಂಬಂತೆ, ಈ ವಾರ ಕ್ಯಾಪ್ಟನ್ ಆಗಿ ತಮ್ಮ ತಂಡವನ್ನು ಉತ್ತಮವಾಗಿ ಮುನ್ನಡೆಸಿದ್ದರೂ ಕೂಡ ಸ್ಪರ್ಧಿಗಳೆಲ್ಲಾ ಅವರಿಗೆ ಕಳಪೆ ಪಟ್ಟ ಕೊಟ್ಟಿರುವುದು ಇಂದಿನ ಪ್ರೋಮೋದಲ್ಲಿದೆ.
'ಉತ್ತಮ-ಕಳಪೆಯ ಆಯ್ಕೆ ಮಾಡಿಯಾಯ್ತು ಮನೆಮಂದಿ!' ಎಂಬ ಶೀರ್ಷಿಕೆಯಲ್ಲಿ ಪ್ರೋಮೋ ಅನಾವರಣಗೊಂಡಿದೆ. ಈ ವಾರ ಸ್ಪರ್ಧಿಗಳಿಗೆ ಬಿಗ್ ಬಾಸ್ ವಿಶೇಷ ಟಾಸ್ಕ್ವೊಂದನ್ನು ನೀಡಿದ್ದರು. ಇದಕ್ಕಾಗಿ ತನಿಷಾ ಮತ್ತು ಸಂಗೀತಾರನ್ನು ತಂಡದ ಮಾಲೀಕರನ್ನಾಗಿ ನಿಯೋಜಿಸಲಾಗಿತ್ತು. ಈ ಎರಡು ಕ್ಯಾಪ್ಟನ್ಗಳು ತಮ್ಮ ಮನೆಯ ಸದಸ್ಯರನ್ನು ತಂಡಕ್ಕೆ ಹಣ ಕೊಟ್ಟು ಖರೀದಿಸುವ ಅವಕಾಶ ಕೊಡಲಾಗಿತ್ತು. ಇದರಂತೆ ಸಂಗೀತಾ ತಂಡವನ್ನು ಮನಃಪೂರ್ವಕವಾಗಿ ಸೇರಿಕೊಂಡ ಸ್ಪರ್ಧಿಗಳು ಕೊನೆಯಲ್ಲಿ ಅವರಿಗೆ ತಿರುಗಿ ಬಿದ್ದರು.
ಪ್ರತಿ ವಾರದ ಕೊನೆಯಲ್ಲಿ ಅಂದರೆ ಶುಕ್ರವಾರ ಈ ವಾರದ ಇಡೀ ಆಟವನ್ನು ಗಮನಿಸಿ ಒಬ್ಬರಿಗೆ ಉತ್ತಮ, ಮತ್ತೊಬ್ಬರಿಗೆ ಕಳಪೆ ಪಟ್ಟವನ್ನು ಕೊಡುವುದು ಬಿಗ್ ಬಾಸ್ ನಿಯಮ. ಅದರಂತೆ ಸ್ಪರ್ಧಿಗಳು ವಿನಯ್ಗೆ ಉತ್ತಮ ಕೊಟ್ಟು, ಸಂಗೀತಾ ಅವರಿಗೆ ಕಳಪೆ ನೀಡಿದ್ದಾರೆ. ಮೈಕಲ್, ವಿನಯ್, ಕಾರ್ತಿಕ್, ತುಕಾಲಿ ಸಂತೋಷ್ ಸೇರಿದಂತೆ ಹೆಚ್ಚಿನವರು ಸಂಗೀತ ಅವರ ಹೆಸರನ್ನೇ ಕಳಪೆಗೆ ಸೂಚಿಸಿದ್ದಾರೆ. ಇದನ್ನು ನಗುಮುಖದಿಂದಲೇ ಸ್ವೀಕರಿಸಿದ ಸಂಗೀತಾ ಅವರು, 'ಇದಕ್ಕೆ ಸಮಯ ಉತ್ತರ ಕೊಡುತ್ತದೆ' ಎಂದು ಹೇಳಿ ಜೈಲಿಗೆ ಹೋಗಿದ್ದಾರೆ.