ಹೈದರಾಬಾದ್ :ಬಾಲಿವುಡ್ಗೆ ಸಂಬಂಧಿಸಿದಂತೆ 2023 ಅನ್ನು ಪ್ಯಾಚ್ ಅಪ್ ವರ್ಷ ಎಂದು ಕರೆಯಬಹುದು. ಗಾಯಕ ಅರಿಜಿತ್ ಸಿಂಗ್ ಅವರು ಸೂಪರ್ಸ್ಟಾರ್ ಸಲ್ಮಾನ್ ಖಾನ್ ಅವರ ಮನೆಗೆ ಬಂದ ನಂತರ ಮತ್ತು ಕರಣ್ ಜೋಹರ್ ಅವರು ಕಾರ್ತಿಕ್ ಆರ್ಯನ್ ಹೊಸ ಚಿತ್ರಕ್ಕೆ ಸಹಿ ಹಾಕಿದ ಬಳಿಕ ಹಾಗೂ ಒಂದು ವರ್ಷದ ನಂತರ ಶಾರುಖ್ ಖಾನ್ ಮತ್ತು ಸನ್ನಿ ಡಿಯೋಲ್ ಒಬ್ಬರನ್ನೊಬ್ಬರು ಹಾಡಿ ಹೊಗಳುತ್ತಿರುವುದನ್ನು ಕಂಡು 2023ರನ್ನು ಅಧಿಕೃತವಾಗಿ ಪ್ಯಾಚ್-ಅಪ್ಗಳ ವರ್ಷ ಎನ್ನಬಹುದು.
ಹೌದು, ಸಿನಿಮಾ ರಂಗದಲ್ಲಿ ಯಾರು?, ಯಾವಾಗ? ಯಾವ ಕಾರಣಕ್ಕೆ ಜಗಳ ಮಾಡಿಕೊಂಡು ದೂರ ದೂರ ಆಗುತ್ತಾರೆ ಅಂತ ಊಹಿಸುವುದಕ್ಕೂ ಆಗುವುದಿಲ್ಲ, ಅಷ್ಟರ ಮಟ್ಟಿಗೆ ಇಲ್ಲಿ ಸಂಬಂಧಗಳು ನಾಜೂಕಾಗಿವೆ. ಅದರಲ್ಲೂ, ಬಾಲಿವುಡ್ನಲ್ಲಿ ಇಂದು ಒಳ್ಳೆಯ ಸ್ನೇಹಿತರಾಗಿರುವವರು ನಾಳೆ ಯಾವುದೋ ವಿಷಯಕ್ಕೆ ಮನಸ್ತಾಪ ಮಾಡಿಕೊಂಡು ದೂರ ಆಗಿರುತ್ತಾರೆ. ಬಳಿಕ, ಮತ್ಯಾವುದೋ ಸಂದರ್ಭದಲ್ಲಿ ಒಂದಾಗುತ್ತಾರೆ.
'ದೋಸ್ತಾನಾ 2' ಅನ್ನು ಅಧಿಕೃತವಾಗಿ ಘೋಷಿಸಿದ ನಂತರ ಕರಣ್ ಜೋಹರ್ ಮತ್ತು ಕಾರ್ತಿಕ್ ಆರ್ಯನ್ ನಡುವಿನ ಭಿನ್ನಾಭಿಪ್ರಾಯಗಳು ಕಡಿಮೆಯಾಗಿವೆ. ಹಾಗೆಯೇ, ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ಮತ್ತು ಹಿನ್ನೆಲೆ ಗಾಯಕ ಅರಿಜಿತ್ ಸಿಂಗ್ ಅವರ 9 ವರ್ಷಗಳ ವೈಷಮ್ಯ 2023 ರಲ್ಲಿ ಕೊನೆಗೊಂಡಿದೆ.
2014 ರಲ್ಲಿ ಪ್ರಶಸ್ತಿ ಸಮಾರಂಭವೊಂದರಲ್ಲಿ ಸಲ್ಮಾನ್ ಖಾನ್ ಮತ್ತು ಅರಿಜಿತ್ ಸಿಂಗ್ ನಡುವೆ ದೊಡ್ಡ ಜಗಳವೇ ನಡೆದಿತ್ತು. ಆ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲು ಅರಿಜಿತ್ ಸಿಂಗ್ ವೇದಿಕೆಗೆ ಬಂದಾಗ ಸಲ್ಮಾನ್ ಖಾನ್ ಕಾರ್ಯಕ್ರಮ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಆದರೆ, ಇತ್ತಿಚೆಗಷ್ಟೇ ಗಾಯಕ ಅರಿಜಿತ್ ಸಿಂಗ್ ಮುಂಬೈನಲ್ಲಿರುವ ಸಲ್ಮಾನ್ ಅವರ ಗ್ಯಾಲಕ್ಸಿ ಅಪಾರ್ಟ್ಮೆಂಟ್ನಿಂದ ತಮ್ಮ ಕಾರಿನಲ್ಲಿ ಕೂತು ಹೊರ ಹೋಗುತ್ತಿರುವ ವಿಡಿಯೋವನ್ನು ಸೆರೆ ಹಿಡಿಯಲಾಗಿತ್ತು. ಈ ವಿಡಿಯೋ ನೋಡಿದ ಅಭಿಮಾನಿಗಳು ಇಬ್ಬರ ನಡುವಿನ ದ್ವೇಷ ಕಡಿಮೆಯಾಗಿದೆ ಎಂದು ಮಾತನಾಡಿಕೊಂಡಿದ್ದರು.