ಕನ್ನಡದ ಪ್ರಸಿದ್ಧ ಕವಿ ಗೋಪಾಲಕೃಷ್ಣ ಅಡಿಗರು ಬರೆದಿರುವ, 'ಯಾವ ಮೋಹನ ಮುರಳಿ ಕರೆಯಿತು' ಎಂಬ ಹಾಡಿನ ಮೊದಲ ಸಾಲೇ ಚಿತ್ರದ ಶೀರ್ಷಿಕೆಯಾಗಿದೆ. ಇತ್ತೀಚೆಗೆ ಈ ಚಿತ್ರಕ್ಕಾಗಿ ಗೀತರಚನೆಕಾರ ವಿ.ನಾಗೇಂದ್ರ ಪ್ರಸಾದ್ ಬರೆದಿರುವ, 'ಯಾವ ಮೋಹನ ಮುರಳಿ ಕರೆಯಿತು' ಟೈಟಲ್ ಸಾಂಗ್ ಬಿಡುಗಡೆಯಾಯಿತು. ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಹಾಡು ರಿಲೀಸ್ ಮಾಡಿ, ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು.
ಮುಖ್ಯಭೂಮಿಕೆಯಲ್ಲಿ ಬೇಬಿ ಪ್ರಕೃತಿ, ನಾಯಕ ಮಾಧವ, ನಾಯಕಿ ಸ್ವಪ್ನ ಶೆಟ್ಟಿಗಾರ್ ಅಭಿನಯಿಸಿರುವ ಚಿತ್ರವನ್ನು ವಿಶ್ವಾಸ್ ಕೃಷ್ಣ ನಿರ್ದೇಶಿಸಿದ್ದಾರೆ. ನಿರ್ದೇಶಕರು ಹೇಳುವಂತೆ, ವಿಶೇಷಚೇತನ ಹುಡುಗಿ ಹಾಗೂ ಶ್ವಾನದ ನಡುವಿನ ಪ್ರೀತಿಯ ಕುರಿತ ಚಿತ್ರವಿದು. ಕನ್ನಡದಲ್ಲಿ ಶ್ವಾನದ ಕುರಿತಾದ ಚಿತ್ರಗಳು ಬಂದಿವೆ. ಆದರೆ ಈ ಕಥೆ ವಿಭಿನ್ನ. ಅನಿಲ್ ಸಿ.ಜೆ ಸಂಗೀತ ನೀಡಿರುವ ಎಲ್ಲಾ ಹಾಡುಗಳೂ ಚೆನ್ನಾಗಿವೆ ಎಂದು ಚಿತ್ರತಂಡ ಹೇಳಿದೆ.
ನಾನು ಮೂಲತಃ ಉದ್ಯಮಿ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆ. ಹಾಡು ಬಿಡುಗಡೆ ಮಾಡಿಕೊಟ್ಟ ಉಮಾಪತಿ ಅವರಿಗೆ ಧನ್ಯವಾದ ಎಂದು ನಿರ್ಮಾಪಕ ಶರಣಪ್ಪ ಗೌರಮ್ಮ ಹೇಳಿದರು. ಗೀತರಚನೆಕಾರ ಗೌಸ್ ಫಿರ್, ರಾಕಿ (ಶ್ವಾನ) ಮತ್ತು ಟ್ರೈನರ್ ಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಶ್ವಾನ ರಾಕಿ ಸಹ ವೇದಿಕೆ ಮೇಲೆ ಕುಳಿತು ಸಮಾರಂಭ ವೀಕ್ಷಿಸಿದ್ದು ವಿಶೇಷವಾಗಿತ್ತು.