ಕನ್ನಡ ಚಿತ್ರರಂಗದಲ್ಲಿ ಸಾಹಸ ಸಿಂಹ ಅಂತಾ ಕರೆಯಿಸಿಕೊಂಡ ಏಕೈಕ ನಟ ಡಾ. ವಿಷ್ಣುವರ್ಧನ್. ತಮ್ಮ ಅಮೋಘ ಅಭಿನಯ ಹಾಗೂ ವಿಭಿನ್ನ ಸಿನಿಮಾಗಳ ಮೂಲಕ ಅಭಿಮಾನಿಗಳ ಹೃದಯವಂತನಾದ ವಿಷ್ಣುದಾದ ನಮ್ಮನ್ನೆಲ್ಲ ಅಗಲಿ ಬರೋಬ್ಬರಿ 13 ವರ್ಷಗಳು ಆಗ್ತಾ ಇದೆ. ಆದರೆ, ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಆಗಲಿಲ್ಲ ಎಂದು ಸಾವಿರಾರು ಅಭಿಮಾನಿಗಳು ಬೇಸರ ವ್ಯಕ್ಯಪಡಿಸಿದ್ದರು. ಇದೀಗ ವಿಷ್ಣುವರ್ಧನ್ ಅವರ ಸ್ಮಾರಕದ ಕೆಲಸಗಳು ಸಂಪೂರ್ಣವಾಗಿ ಮುಗಿದಿದ್ದು, ಉದ್ಘಾಟನೆಗೆ ಮುಹೂರ್ತ ಫಿಕ್ಸ್ ಆಗಿದೆ.
ಹೌದು, ಮೈಸೂರಿನ ಉದ್ಬೂರು ಗೇಟ್ ಬಳಿಯ ಹಾಲಾಳು ಗ್ರಾಮದಲ್ಲಿ ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಸುಮಾರು 5.5 ಎಕರೆ ಜಾಗದಲ್ಲಿ ವಿಷ್ಣು ಸ್ಮಾರಕ ಹಾಗೂ 6 ಅಡಿ ಎತ್ತರ ವಿಷ್ಣುವರ್ಧನ್ ಪುತ್ಥಳಿ ನಿರ್ಮಾಣ ಆಗಿದ್ದು, ಲೋಕಾರ್ಪಣೆಗೆ ರೆಡಿಯಾಗಿದೆ. ಈ ವಿಚಾರವನ್ನ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಅವರು ವಿಷ್ಣುದಾದ ಅಭಿಮಾನಿಗಳು ಖುಷಿ ಪಡುವ ಸುದ್ದಿಯೊಂದನ್ನ ಹಂಚಿಕೊಂಡಿದ್ದಾರೆ.
ಇದೇ ತಿಂಗಳು 29 ರಂದು ಡಾ. ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ ಆಗೋದಕ್ಕೆ ಎಲ್ಲ ರೀತಿಯ ಸಕಲ ಸಿದ್ಧತೆಗಳು ಆಗಿದೆಯಂತೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಈ ತಿಂಗಳು ವಿಷ್ಣುವರ್ಧನ್ ಸ್ಮಾರಕವನ್ನು ಉದ್ಘಾಟನೆ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ಹೇಳುವ ಮುಖಾಂತರ ವಿಷ್ಣು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಇಷ್ಟು ದಿನ ಕಾಯುತ್ತಿದ್ದ ವಿಷ್ಣುವರ್ಧನ್ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಂತಾ ಅನಿರುದ್ಧ ಈ ಖುಷಿ ವಿಚಾರವನ್ನ ಹಂಚಿಕೊಂಡಿದ್ದಾರೆ. ಮೈಸೂರಿನ ಉದ್ಬೂರು ಗೇಟ್ ಬಳಿಯ ಹಾಲಾಳು ಗ್ರಾಮದಲ್ಲಿ ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡಲಾಗಿದ್ದು, ವಸ್ತು ಸಂಗ್ರಹಾಲಯ, ಅಭಿನಯ ತರಬೇತಿ ಶಾಲೆ, ನಾಟಕೋತ್ಸವ, ಚಿತ್ರೋತ್ಸವಗಳನ್ನು ನಡೆಸುವಂತಹ ವೇದಿಕೆಗಳು ಇಲ್ಲಿರಲಿವೆ. ವಿಷ್ಣುವರ್ಧನ್ ಅವರ ಅಪರೂಪದ ಫೋಟೋ, ಅವರು ಬಳಸುತ್ತಿದ್ದ ವಸ್ತುಗಳು, ಬಟ್ಟೆ, ವಿಷ್ಣು ಅವರಿಗೆ ಬಂದ ಪ್ರಶಸ್ತಿ ಎಲ್ಲವನ್ನೂ ಮ್ಯೂಸಿಯಂನಲ್ಲಿ ಇಡಲು ಸಿದ್ಧತೆ ಮಾಡಿಕೊಳ್ಳಲಾಗಿದೆಯಂತೆ. ಬರೋಬ್ಬರಿ 11 ಕೋಟಿ ವೆಚ್ಚದಲ್ಲಿ ವಿಷ್ಣುವರ್ಧನ್ ಸ್ಮಾರಕವನ್ನು ಕರ್ನಾಟಕ ರಾಜ್ಯ ಸರ್ಕಾರ ನಿರ್ಮಾಣ ಮಾಡಿದೆ.
ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಣವನ್ನು ಮೈಸೂರಿನಲ್ಲೇ ಮುಗಿಸಿದ್ದರು. ಇಲ್ಲಿನ ಚಾಮುಂಡಿಪುರಂನಲ್ಲೇ ವಾಸವಿದ್ದರು. ತಮ್ಮ ಚಿತ್ರದ ಶೂಟಿಂಗ್ ಅನ್ನು ಮೈಸೂರಿನಲ್ಲಿ ಇಟ್ಟುಕೊಂಡರೆ ಸಂಭ್ರಮಿಸುತ್ತಿದ್ದರು. ಚಾಮುಂಡಿಬೆಟ್ಟ ಎಂದರೆ ವಿಷ್ಣುವರ್ಧನ್ ಅವರ ನೆಚ್ಚಿನ ತಾಣವಾಗಿತ್ತು. ಡಾ. ವಿಷ್ಣುವರ್ಧನ್ ಅವರ ಸ್ಮಾರಕದಲ್ಲಿ ಸಾಕಷ್ಟು ವಿಶೇಷತೆಯಿಂದ ಕೂಡಿದೆ ಎನ್ನಲಾಗಿದೆ. ಸ್ಮಾರಕದ ಜೊತೆಗೆ ಕಲಾಭಿಮಾನಿಗಳಿಗೆ ಅನುಕೂಲವಾಗಲಿ ಎಂದು ರಂಗಮಂದಿರ, ನಾಟಕ ತರಬೇತಿ ಶಾಲೆ ಇರಲಿದೆ ಎಂದು ಹೇಳಲಾಗುತ್ತಿದೆ. 13 ವರ್ಷಗಳ ಬಳಿಕ ವಿಷ್ಣುವರ್ಧನ್ ಸ್ಮಾರಕ ರೆಡಿಯಾಗಿ, ಲೋಕಾರ್ಪಣೆ ಆಗುತ್ತಿರೋದು ವಿಷ್ಣು ದಾದಾ ಅವರ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.
ಇದನ್ನೂ ಓದಿ:ಸಿಎಂ ಬೊಮ್ಮಾಯಿ ನಿವಾಸಕ್ಕೆ ಶಿವರಾಜ್ ಕುಮಾರ್ ದಂಪತಿ ಭೇಟಿ..!