ಕನ್ನಡ ಚಿತ್ರರಂಗದಲ್ಲಿ ಪ್ರೀತಿಸಿ ದಾಂಪತ್ಯ ಜೀವನ ಆರಂಭಿಸಿರುವ ಕೆಲ ಸ್ಟಾರ್ ಜೋಡಿಗಳಿವೆ. ಈ ಸಾಲಿನಲ್ಲಿ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಜೋಡಿ ಕೂಡ ಒಂದು. ತಾವು ಅಂದುಕೊಂಡಂತೆ ಕೆಲ ದಿನಗಳ ಹಿಂದಷ್ಟೇ ಕುಟುಂಬಸ್ಥರ ಆಶೀರ್ವಾದಗಳೊಂದಿಗೆ ಅದ್ಧೂರಿಯಾಗಿ ಸಪ್ತಪದಿ ತುಳಿದಿದ್ದಾರೆ. ಅಭಿಮಾನಿಗಳ ಪ್ರೀತಿಯ 'ಸಿಂಹಪ್ರಿಯಾ' ಮದುವೆ ಬಳಿಕ ತಮ್ಮ ಮೊದಲ ಪ್ರೇಮಿಗಳ ದಿನವನ್ನು ಬಹಳ ವಿಶೇಷವಾಗಿಯೇ ಆಚರಿಸಿದ್ದಾರೆ.
ವಸಿಷ್ಠ ಸಿಂಹ ಹರಿಪ್ರಿಯಾ ದಂಪತಿ ಹೌದು, ಪ್ರೇಮಿಗಳ ದಿನಾಚರಣೆಯ ಈ ವಿಶೇಷ ದಿನದಂದು ಪ್ರೇಮಕಥೆಗಳ ಪುಸ್ತಕವನ್ನು ಲೋಕಾರ್ಪಣೆ ಮಾಡುವುದರ ಮೂಲಕ ತಮ್ಮ ಪ್ರೇಮ ದಿನಗಳನ್ನು ಮೆಲುಕು ಹಾಕಿದ್ದಾರೆ. ಮಾವಲಿ ಪಬ್ಲಿಕೇಶನ್ನ ಮೊದಲ ಪುಸ್ತಕವಾದ ಶಿವಕುಮಾರ ಮಾವಲಿಯವರ 'ಪ್ರೇಮಪತ್ರದ ಆಫೀಸು ಮತ್ತು ಅವಳು'ಎಂಬ ವಿಶಿಷ್ಟ ಶೀರ್ಷಿಕೆಯ ಕಥಾ ಸಂಕಲನವನ್ನು ಈ ಸ್ಯಾಂಡಲ್ವುಡ್ ತಾರಾ ದಂಪತಿ ಬಿಡುಗಡೆ ಮಾಡಿದ್ದಾರೆ. ಲೇಖಕ ಶಿವಕುಮಾರ ಮಾವಲಿ, ಪ್ರಕಾಶಕಿ ಪ್ರೇಮ ಶಿವಕುಮಾರ ಜೊತೆಗೂಡಿ ಇಬ್ಬರೂ ಪ್ರೇಮ ಪುಸ್ತಕವನ್ನು ಬಿಡುಗಡೆ ಮಾಡುವ ಮೂಲಕ ತಮ್ಮ ಪ್ರೀತಿಯ ದಿನಗಳ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
'ಪ್ರೇಮಪತ್ರದ ಆಫೀಸು ಮತ್ತು ಅವಳು' ಎಂಬ ಶೀರ್ಷಿಕೆಯೇ ಆಸಕ್ತಿ ಹುಟ್ಟಿಸುವಂತಿದೆ. ನಾವೂ ಕೂಡ ಪ್ರೇಮಪತ್ರಗಳನ್ನು ಬರೆದುಕೊಳ್ತಿದ್ದೆವು ಎಂದು ನೆನಪು ಮಾಡಿಕೊಂಡು, ಪುಸ್ತಕದಲ್ಲಿದ್ದ ಎರಡು ಪತ್ರಗಳ ಸಾಲುಗಳನ್ನು ನಟ ವಸಿಷ್ಠ ಸಿಂಹ ಹಾಗು ನಟಿ ಹರಿಪ್ರಿಯಾ ಓದಿದರು.
'ಪ್ರೇಮಪತ್ರದ ಆಫೀಸು ಮತ್ತು ಅವಳು' ಅನಾವರಣಗೊಳಿಸಿದ ಸಿಂಹಪ್ರಿಯಾ ನಟ ವಸಿಷ್ಠ ಸಿಂಹ ಅವರು ಈ ಪ್ರೇಮಿಗಳ ದಿನದಂದು ಪತ್ನಿ ಹರಿಪ್ರಿಯಾರಿಗೆ ತಮ್ಮ ಪ್ರೇಮವನ್ನು ಬಹಳ ಸೊಗಸಾಗಿ ವ್ಯಕ್ತಪಡಿಸಿದರು. ಹರಿಪ್ರಿಯಾ ''ಸಾವಿರ ಜನರ ಮಧ್ಯೆ ಇದ್ದರೂ ನಾನು ಏಕಾಂಗಿಯೇ, ನಿನ್ನ ನೆನಪಿನ ಭಾವವಿರದಿದ್ದರೆ'' ಎಂದು ಹೇಳಿದರೆ, ವಸಿಷ್ಠ ಸಿಂಹ, " ತನಗಾಗಿ ಏನನ್ನೂ ಮಾಡಿಕೊಳ್ಳದ ನೀರಿನಂತೆ ನಾನು ನಿನ್ನನ್ನು ಪ್ರೀತಿಸುತ್ತೇನೆ" ಎಂದು ಹೇಳಿ ಹರಿಪ್ರಿಯಾರ ಮೊಗದಲ್ಲಿ ನಗು ಮೂಡಿಸಿದರು. ಇಷ್ಟು ವರ್ಷಗಳಿಗಿಂತ ಈ ಬಾರಿ ನಮ್ಮ ವ್ಯಾಲಂಟೈನ್ ಡೇ ವಿಶೇಷವಾಗಿ ಆಯಿತು. ಪ್ರೇಮಪುಸ್ತಕವೊಂದು ನಮ್ಮಿಂದ ಬಿಡುಗಡೆ ಆಗುವಂತಾಯಿತು ಎಂದು ಹರಿಪ್ರಿಯಾ ಹರ್ಷ ವ್ಯಕ್ತಪಡಿಸಿದರು.
'ಪ್ರೇಮಪತ್ರದ ಆಫೀಸು ಮತ್ತು ಅವಳು' ಓದುತ್ತಿರುವ ಸಿಂಹಪ್ರಿಯಾ ಇದನ್ನೂ ಓದಿ:ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಿಗೆ ನಾಳೆ ಸಿಗಲಿದೆ ಗುಡ್ ನ್ಯೂಸ್
'ದೇವರು ಅರೆಸ್ಟ್ ಆದ' ಮತ್ತು 'ಟೈಪಿಸ್ಟ್ ತಿರಸ್ಕರಿಸಿದ ಕಥೆ' ಎಂಬ ಕಥಾ ಸಂಕಲನಗಳ ಮೂಲಕ ಹೊಸ ರೀತಿಯ ಕಥೆಗಳನ್ನು ಪರಿಚಯಿಸಿದ ಶಿವಕುಮಾರ ಮಾವಲಿಯವರ 'ಸುಪಾರಿ ಕೊಲೆ' ನಾಟಕ ಒಂದು ಪತ್ತೇದಾರಿ ಮಾದರಿಯ ನಾಟಕವಾಗಿದ್ದರೆ, ಇತ್ತೀಚೆಗೆ ಪ್ರದರ್ಶನಗೊಂಡ ಅವರ 'ಒಂದು ಕಾನೂನಾತ್ಮಕ ಕೊಲೆ' ನಾಟಕ, ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಬಳಸಿಕೊಂಡು, ರಾಜಕೀಯ ವಿಡಂಬನೆ ಮಾಡುವ ನಾಟಕವಾಗಿದೆ. ಹಾಗೆಯೇ ರಾಜೀವ್ ಗಾಂಧಿ ಹತ್ಯೆಯ ಸಮಯದಲ್ಲಿ ಬೆಂಗಳೂರಿನ ವ್ಯಕ್ತಿಯೊಬ್ಬರ ಬದುಕಲ್ಲಿ ನಡದ ಘಟನೆಯ ಆಧಾರಿತ ಕಾದಂಬರಿ 'LTTE Murthy Calling' ಇತ್ತೀಚೆಗಷ್ಟೆ ತಮಿಳಿಗೆ ಅನುವಾದ ಆಗಿದೆ. ಈಗ ಅವರ ಹೊಸ ಕಥಾ ಸಂಕಲನ "ಪ್ರೇಮಪತ್ರದ ಆಫೀಸು ಮತ್ತು ಅವಳು" ಮಾವಲಿ ಪಬ್ಲಿಕೇಶನ್ನಿಂದ ಪ್ರಕಟವಾಗುತ್ತಿರುವ ಮೊದಲ ಪುಸ್ತಕ. ಸದ್ಯ ಈ ಪುಸ್ತಕವು ಮಾರುಕಟ್ಟೆಯಲ್ಲಿ ಲಭ್ಯವಿದೆ.
ಇದನ್ನೂ ಓದಿ:ಏರಿಳಿತಗಳ ನಡುವೆ ಪತಿಗೆ ಪತ್ನಿ ಸಾಥ್: ನವಜೋಡಿಗಳಿಗೆ ಸ್ಫೂರ್ತಿ ರಿಷಬ್ ಶೆಟ್ಟಿ ಪ್ರೇಮಕಥೆ