'ಆಪರೇಷನ್ ಅಲಮೇಲಮ್ಮ', 'ಕವಲುದಾರಿ' ಸಿನಿಮಾಗಳ ಖ್ಯಾತಿಯ ರಿಷಿ ನಟನೆಯ 'ರಾಮನ ಅವತಾರ' ಚಿತ್ರದ ಮೊದಲ ಹಾಡು ಬಿಡುಗಡೆ ಆಗಿದೆ. ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿರುವ 'ರಾಮ ಈಸ್ ಜೆಂಟಲ್ ಮ್ಯಾನ್' ಎಂಬ ಹಾಡಿಗೆ ಯುವ ಗಾಯಕ ಅಭಿನಂದನ್ ಮಹಿಶಾಲೆ ಧ್ವನಿಯಾಗಿದ್ದು, ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಟೈಟಲ್ ಕಂ ರೋಮ್ಯಾಂಟಿಕ್ ಹಾಡಾಗಿರುವ 'ರಾಮ ಈಸ್ ಜೆಂಟಲ್ ಮ್ಯಾನ್'ನಲ್ಲಿ ನಾಯಕ ನಟ ರಿಷಿ ತನ್ನ ಪ್ರೀತಿಯನ್ನು ನಾಯಕಿ ನಟಿ ಶುಭ್ರಗೆ ವ್ಯಕ್ತಪಡಿಸುತ್ತಾ ಹೆಜ್ಜೆ ಹಾಕಿದ್ದಾರೆ.
ಈ ಹಾಡಿನ ಚಿತ್ರೀಕರಣ ಸಾವನದುರ್ಗ ಮತ್ತು ಶಿವಗಂಗೆಯಲ್ಲಿ ಮಾಡಿದ್ದು ವೆಸ್ಟೆರ್ನ್ ಶೈಲಿಯ ಸಂಗೀತಕ್ಕೆ ಪಕ್ಕಾ ದೇಸಿ ಟಚ್ ಕೊಟ್ಟಂತಿದೆ. ಸಾಹಿತ್ಯ ಕೇಳಲು ಇಂಪಾಗಿರುವದರ ಜೊತೆಗೆ ಪ್ರೇಕ್ಷರ ಮುಖದಲ್ಲಿ ನಗು ತರಿಸುವುದರಲ್ಲಿ ಯಶಸ್ವಿಯಾಗಿದೆ. ತಮ್ಮದೇ ವಿಭಿನ್ನ ಶೈಲಿಯ ನಟನೆಯಿಂದ ಜನರ ಮನಸ್ಸು ಗೆದ್ದಿರುವ ರಿಷಿ 'ರಾಮ ಈಸ್ ಜೆಂಟಲ್ ಮ್ಯಾನ್' ಹಾಡಿನಲ್ಲಿ ಕುಣಿದು ಜನರನ್ನು ಮನರಂಜಿಸಿದ್ದಾರೆ. ಈ ಹಾಡಿನ ಮುಖಾಂತರ ಜನರ ಮನಸ್ಸನ್ನು ಮತ್ತೊಮ್ಮೆ ಗೆದ್ದಿರುವ ತಂಡ ಚಿತ್ರದ ಉಳಿದ ಹಾಡುಗಳನ್ನು ಬಿಡುಗಡೆ ಮಾಡುವ ತಯಾರಿಯಲ್ಲಿದೆ.
ಪುರಾಣ ರಾಮನಿಗೆ ಸೀತೆ ಮಾತ್ರ ನಾಯಕಿ. ಆದರೆ, ರಿಷಿಯ ರಾಮನ ಅವತಾರಕ್ಕೆ ಇಬ್ಬರು ನಾಯಕಿಯರಿದ್ದಾರೆ. ವಜ್ರಕಾಯ ಸಿನಿಮಾ ಖ್ಯಾತಿಯ ಶುಭ್ರ ಅಯ್ಯಪ್ಪ ಹಾಗೂ ಬಟ್ಟಲು ಕಣ್ಣಿನ ಚೆಲುವೆ ಪ್ರಣಿತ ಸುಭಾಷ್. ಅರುಣ್ ಸಾಗರ್ ಸಹ ಚಿತ್ರದಲ್ಲಿ ಪ್ರಮುಖ ಪಾತ್ರವಾಗಿರಲಿದ್ದಾರೆ. ಜೂಡೊ ಸ್ಯಾಂಡಿ ಅವರ ಸಂಗೀತ ನಿರ್ದೇಶನ ಸಿನಿಮಾಕ್ಕಿದೆ. ಸ್ಟಾರ್ ಫ್ಯಾಬ್ ಪ್ರೊಡಕ್ಷನ್ ಅಡಿ 'ಆಪರೇಷನ್ ಅಲಮೇಲಮ್ಮ' ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಜಾನರ್ ಈ ಸಿನಿಮಾಗೆ ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶ್ ಪಾಂಡೇ ಕ್ಯಾಮೆರಾ ಕೈಚಳಕವಿದೆ. ಅಮರನಾಥ್ ಸಂಲಕನವಿದೆ. ಉಡುಪಿ, ಬೆಂಗಳೂರು ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಸಲಾಗಿದೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಜೂನ್ ಮೊದಲ ವಾರ ಸಿನಿಮಾ ತೆರೆ ಕಾಣಲು ಚಿತ್ರತಂಡ ಯೋಜಿಸಿದೆ.