ಕರುನಾಡಲ್ಲಿ ಘಮ್ಮೆಂದ 'ಟಗರು ಪಲ್ಯ'; ಎರಡನೇ ವಾರವೂ ಹೌಸ್ಫುಲ್ ಪ್ರದರ್ಶನ ಕರುನಾಡ ಅಂಗಳದಲ್ಲಿ ಕನ್ನಡ ರಾಜ್ಯೋತ್ಸವದ ಜೊತೆಗೆ 'ಟಗರು ಪಲ್ಯ' ವಿಜಯೋತ್ಸವವೂ ಜೋರಾಗಿದೆ. ಡಾಲಿ ಧನಂಜಯ್ ನಿರ್ಮಾಣದ ಈ ಸಿನಿಮಾ ಸೂಪರ್ ಹಿಟ್ ಆಗಿದೆ. ನಾಟಿ ಸ್ಟೈಲ್ನಲ್ಲಿ ತಯಾರಾಗಿ ಥಿಯೇಟರ್ಗೆ ಬಂದ 'ಟಗರು ಪಲ್ಯ' ಕನ್ನಡ ಕಲಾಭಿಮಾನಿಗಳಿಗೆ ರುಚಿಕೊಟ್ಟಿದೆ. ಪ್ರೇಕ್ಷಕರು ಒಮ್ಮತದಿಂದ ಗ್ರಾಮೀಣ ಸೊಗಡಿನ ಸಿನಿಮಾವನ್ನು ಗೆಲ್ಲಿಸಿಕೊಟ್ಟಿದ್ದಾರೆ.
ಗಂಧದ ಗುಡಿಯಲ್ಲಿ ಘಮ್ಮೆಂದ 'ಟಗರು ಪಲ್ಯ'ಕ್ಕೆ ಈಗ ಅಕ್ಕ-ಪಕ್ಕದ ರಾಜ್ಯದಿಂದಲೂ ಬೇಡಿಕೆ ಹೆಚ್ಚಾಗಿದೆ. ಸಿನಿಮಾ ರೈಟ್ಸ್ಗೆ ಕ್ಯೂ ನಿಲ್ಲುವಷ್ಟರ ಮಟ್ಟಿಗೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಇದಕ್ಕೆಲ್ಲಾ ಕಾರಣಕರ್ತರಾಗಿರುವ ಕನ್ನಡಿಗರಿಗೆ ಧನ್ಯವಾದ ತಿಳಿಸಲು ಡಾಲಿ ಧನಂಜಯ್ ವಿಜಯಯಾತ್ರೆ ಆರಂಭಿಸಿದ್ದಾರೆ.
'ಟಗರು ಪಲ್ಯ' ವಿಜಯಯಾತ್ರೆ: ಶ್ರೀ ಆದಿಶಕ್ತಿ ಶಿವನಸಮುದ್ರ ಶಿಂಷಾಮಾರಮ್ಮದೇವಿ ದೇವಸ್ಥಾನದಿಂದ `ಟಗರು ಪಲ್ಯ' ವಿಜಯಯಾತ್ರೆ ಆರಂಭಿಸಿದ್ದಾರೆ. ಕೊಳ್ಳೆಗಾಲ, ಮಳವಳ್ಳಿ, ಬೆಳಕವಾಡಿ, ಮಂಡ್ಯ, ಮೈಸೂರು ಒಳಗೊಂಡಂತೆ ಮುಖ್ಯ ಚಿತ್ರಮಂದಿರಗಳಿಗೆ ಭೇಟಿಕೊಟ್ಟು ಪ್ರೇಕ್ಷಕರ ಜೊತೆ ಕುಳಿತು ಸಿನಿಮಾ ವೀಕ್ಷಿಸಿದ್ದಾರೆ. ರಾಜ್ಯದ ಬೇರೆ ಬೇರೆ ಭಾಗಕ್ಕೆ ತೆರಳಿ 'ಟಗರು ಪಲ್ಯ' ಸಕ್ಸಸ್ ಸಂಭ್ರಮಿಸಲು ಪ್ಲಾನ್ ರೂಪಿಸಿದ್ದಾರೆ. ನೆಂಟ್ರನ್ನೆಲ್ಲಾ ಕರ್ಕೊಂಡು ಥಿಯೇಟರ್ಗೆ ಬಂದು ಸಿನಿಮಾ ನೋಡುವಂತೆ ತಿಳಿಸಿದ್ದಾರೆ.
ಶಿವಮೊಗ್ಗ ಭಾರತ್ ಸಿನಿಮಾಸ್ ಹಾಗೂ ಮೈಸೂರು ಡಿಆರ್ಸಿನ ಸಿನಿಮಾಸ್ ಸೇರಿದಂತೆ ರಾಜ್ಯದ ಹಲವು ಚಿತ್ರಮಂದಿರಗಳ ಮಾಲೀಕರು ರಾಜ್ಯೋತ್ಸವದ ಪ್ರಯುಕ್ತ ದಿನವಿಡಿ `ಟಗರು ಪಲ್ಯ' ಶೋಗೆ ಅವಕಾಶ ಕೊಟ್ಟಿದ್ದಾರೆ. ಹಬ್ಬದ ಪ್ರಯುಕ್ತ ರಜೆ ಇರುವ ಕಾರಣಕ್ಕೆ ಸಿನಿಮಾ ಪ್ರೇಮಿಗಳು ಚಿತ್ರಮಂದಿರಕ್ಕೆ ಲಗ್ಗೆ ಇಟ್ಟು 'ಟಗರು ಪಲ್ಯ' ಟೇಸ್ಟ್ ಮಾಡಿದ್ದಾರೆ. ರಾಜ್ಯಾದ್ಯಂತ 'ಟಗರು ಪಲ್ಯ' ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಎರಡನೇ ವಾರವೂ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
'ಟಗರು ಪಲ್ಯ' ಕನ್ನಡ ಕಲಾಭಿಮಾನಿಗಳಿಗೆ ರುಚಿಸಿದೆ. ನಾಗಭೂಷಣ್, ಅಮೃತಾ ಪ್ರೇಮ್ ಜೋಡಿ ಮನ ಗೆದ್ದಿದ್ದಾರೆ. ತಾರಮ್ಮ, ರಂಗಾಯಣ ರಘು, ಶರತ್ ಲೋಹಿತಾಶ್ವ, ಚಿತ್ರಾ ಶೆಣೈ, ಬಿರಾದಾರ್ ಸೇರಿದಂತೆ ಇಡೀ ಪಾತ್ರವರ್ಗಕ್ಕೆ ಶಿಳ್ಳೆ ಚಪ್ಪಾಳೆಗಳು ವ್ಯಕ್ತವಾಗಿವೆ. ವಾಸುಕಿ ವೈಭವ್ ಅದ್ಭುತ ಮ್ಯೂಸಿಕ್ , ಧನಂಜಯ್ ಸಾಹಿತ್ಯ, ಎಸ್ ಕೆ ರಾವ್ ಛಾಯಾಗ್ರಹಣ ಸಿನಿಮಾದ ಶ್ರೀಮಂತಿಕೆ ಹೆಚ್ಚಿಸಿದೆ. ಡಾಲಿ ಧನಂಜಯ್ ಒಡೆತನದ ಡಾಲಿ ಪಿಕ್ಚರ್ಸ್ ನಿರ್ಮಿಸಿರುವ ಮೂರನೇ ಚಿತ್ರವಾಗಿರುವ ಟಗರು ಪಲ್ಯ ಸಿನಿಮಾಗೆ ಉಮೇಶ್ ಕೆ ಕೃಪ ಆ್ಯಕ್ಷನ್ ಕಟ್ ಹೇಳಿದ್ದು, ಮೊದಲ ಹೆಜ್ಜೆಯಲ್ಲೇ ಇವರು ಗೆದ್ದಿದ್ದಾರೆ.
ಕರ್ಮಷಿಯಲ್ ಹಾಗೂ ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರದ ನಡುವೆ ತೆರೆಗೆ ಬಂದ ಹಳ್ಳಿ ಸೊಗಡಿನ ಟಗರು ಪಲ್ಯ ಫ್ಯಾಮಿಲಿ ಹಿಟ್ ಆಗಿದೆ. ಬಡವ ರಾಸ್ಕಲ್, ಹೆಡ್ಬುಷ್ ನಂತರ ಟಗರು ಪಲ್ಯ ಮೂಲಕ ಹ್ಯಾಟ್ರಿಕ್ ಗೆಲುವು ಕಂಡಿರೋ ಜಾಲಿರೆಡ್ಡಿ, ಕನ್ನಡ ಸಿನಿಮಾ ಇಂಡಸ್ಟ್ರಿಗೆ ಮತ್ತೊಂದಿಷ್ಟು ಒಳ್ಳೆ ಸಿನಿಮಾ ನೀಡಲಿ. ಕನ್ನಡಿಗರಿಗೆ ಮನರಂಜನೆ ನೀಡುತ್ತಾ, ಹೊಸ ಕಲಾವಿದರನ್ನು ಬೆಳೆಸುತ್ತ ತಾವು ಬೆಳೆಯುತ್ತಿರುವ ಡಾಲಿಗೆ ಒಳ್ಳೆಯದಾಗಲಿ ಅನ್ನೋದು ಅಭಿಮಾನಿಗಳ ಆಶಯ.
ಇದನ್ನೂ ಓದಿ:'ಟಗರು ಪಲ್ಯ'ಗೆ ಫುಲ್ ಡಿಮ್ಯಾಂಡ್; ಸಿನಿಮಾ ರಿಮೇಕ್ಗೂ ಹೆಚ್ಚಾಯ್ತು ಬೇಡಿಕೆ