ಕೆಂಡಸಂಪಿಗೆ ಹಾಗೂ ಕಾಲೇಜ್ ಕುಮಾರ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಹುಟ್ಟಿಸಿರುವ ನಟ ವಿಕ್ಕಿ ವರಣ್. ಕಾಲೇಜ್ ಕುಮಾರ ಚಿತ್ರದ ಬಳಿಕ ವಿಕ್ಕಿ ವರಣ್ ಅವರು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ 'ಕಾಲಾಪತ್ಥರ್'. ಹೌದು, ವಿಕ್ಕಿ ವರುಣ್ ನಿರ್ದೇಶನ ಮಾಡುವುದರ ಜೊತೆಗೆ ನಟಿಸಿರುವ ಮೊದಲ ಚಿತ್ರ ಕಾಲಾಪತ್ಥರ್. ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗುತ್ತಿದೆ.
ಈ ಹಿನ್ನೆಲೆ, ಕಾಲಾಪತ್ಥರ್ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಅನೂಪ್ ಸೀಳಿನ್ ಸಂಗೀತ ನೀಡಿರುವ ಈ ಚಿತ್ರದ ಐದು ಹಾಡುಗಳನ್ನು ಸೇರಿಸಿ "ಸೌಂಡ್ಸ್ ಆಫ್ ಕಾಲಾಪತ್ಥರ್" ಎಂಬ ಹಾಡುಗಳ ಗುಚ್ಛವನ್ನು ಕೆಲವೇ ನಿಮಿಷಗಳಲ್ಲಿ ತೋರಿಸುವ ವಿಭಿನ್ನ ಪ್ರಯತ್ನಕ್ಕೆ ಕಾಲಾಪತ್ಥರ್ ಚಿತ್ರತಂಡ ಸಾಕ್ಷಿಯಾಯಿತು.
ನಟ ಹಾಗೂ ನಿರ್ದೇಶಕ ವಿಕ್ಕಿ ವರಣ್ ಮಾತನಾಡಿ, ನಿರ್ದೇಶನ ನನ್ನ ಕನಸು. ಆ ಕನಸನ್ನು ನನಸು ಮಾಡಿದ ನಿರ್ಮಾಪಕರಿಗೆ ನಾನು ಆಭಾರಿ. ಸೂರಿ ಅವರ ಬಳಿ ಹತ್ತು ವರ್ಷ ಕೆಲಸ ಮಾಡಿರುವ ಅನುಭವವಿದ್ದ ಹಿನ್ನೆಲೆ ನಿರ್ದೇಶನ ನನಗೆ ಅಷ್ಟು ಕಷ್ಟವಾಗಲಿಲ್ಲ. ಆದ್ರೆ ನಿರ್ದೇಶನ ಹಾಗೂ ನಟನೆ ಎರಡೂ ಒಟ್ಟಿಗೆ ನಿಭಾಯಿಸುವುದು ಸ್ವಲ್ಪ ಕಷ್ಟವೇ. ಆದರೆ, ನಮ್ಮ ಚಿತ್ರತಂಡದ ಸಹಕಾರದಿಂದ "ಕಾಲಾಪತ್ಥರ್" ನಾವು ಅಂದುಕೊಂಡ ಹಾಗೆ ಅದ್ಭುತವಾಗಿ ಮೂಡಿಬಂದಿದೆ. ಏನಾದರೂ ಹೊಸತು ಮಾಡಬೇಕು ಎಂದೆನಿಸಿ "ಸೌಂಡ್ಸ್ ಆಫ್ ಕಾಲಾಪತ್ಥರ್" ವಿಡಿಯೋವನ್ನು ಇಂದು ಬಿಡುಗಡೆ ಮಾಡಿದ್ದೇವೆ. ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. "ಕಾಲಾಪತ್ಥರ್" ಶೀರ್ಷಿಕೆ ಬಗ್ಗೆ ಹೇಳಿದರೆ, ಕಥೆ ಹೇಳಿದಂತೆ. ಹಾಗಾಗಿ ಶೀರ್ಷಿಕೆ ಬಗ್ಗೆ ಸಿನಿಮಾ ನೋಡಿದ ಮೇಲೆ ನಿಮಗೆ ತಿಳಿಯುವುದು ಎಂದು ತಿಳಿಸಿದರು.