ಚಿತ್ರಮಂದಿರದಲ್ಲಿ ಮತ್ತೊಮ್ಮೆ ಸಿಂಘಮ್ ಘರ್ಜಿಸಲು ಸಜ್ಜಾಗಿದೆ. ಬಾಲಿವುಡ್ ನಟರಾದ ಅಜಯ್ ದೇವ್ಗನ್, ಅಕ್ಷಯ್ ಕುಮಾರ್ ಹಾಗೂ ರಣ್ವೀರ್ ಸಿಂಗ್ ತೆರೆ ಹಂಚಿಕೊಳ್ಳುತ್ತಿರುವ ಹೊಸ ಚಿತ್ರವನ್ನು ರೋಹಿತ್ ಶೆಟ್ಟಿ ನಿರ್ದೇಶಿಸಲಿದ್ದಾರೆ. ಈಗಾಗಲೇ ಚಿತ್ರದ ಪೂಜಾ ಕಾರ್ಯಕ್ರಮ ನೆರವೇರಿದೆ.
ಅಜಯ್ ದೇವ್ಗನ್ ಶೂಟಿಂಗ್ ಪ್ರಾರಂಭಿಸಿದ್ದಾರೆ. ಚಿತ್ರತಂಡವು ಮುಹೂರ್ತ ಕಾರ್ಯಕ್ರಮದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ಪೂಜೆಯಲ್ಲಿ ಅಜಯ್ ದೇವ್ಗನ್ ಹಾಗೂ ರಣ್ವೀರ್ ಸಿಂಗ್ ಹಾಗು ನಿರ್ದೇಶಕ ರೋಹಿತ್ ಶೆಟ್ಟಿ ಇದ್ದರು. ಸಿಂಘಮ್ಗಾಗಿ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳು ಇದೀಗ ಮತ್ತಷ್ಟು ಉತ್ಸುಕರಾಗಿದ್ದಾರೆ.
ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಕೂಡಾ ತಮ್ಮ ಮುಂದಿನ ಬಹುನಿರೀಕ್ಷಿತ ಸಿನಿಮಾ ಕುರಿತು ಉತ್ಸಾಹ ವ್ಯಕ್ತಪಡಿಸಿದ್ದಾರೆ. ಸಿಂಘಮ್ ಅಗೈನ್ ಪೂಜಾ ಫೋಟೋಗಳನ್ನು ಹಂಚಿಕೊಂಡ ಓ ಮೈ ಗಾಡ್ ಸಿನಿಮಾ ನಟ, ''ಶೂಟಿಂಗ್ ಸೆಟ್ನಲ್ಲಿ ನಿಮ್ಮೊಂದಿಗೆ ಸೇರಿಕೊಳ್ಳಲು ಹೆಚ್ಚು ಕಾಯಲು ಸಾಧ್ಯವಿಲ್ಲ. ಚಿತ್ರತಂಡಕ್ಕೆ ಶುಭವಾಗಲಿ, ಜೈ ಮಹಾಕಾಲ್'' ಎಂದು ಬರೆದಿದ್ದಾರೆ.
ನಾಯಕ ನಟ ಅಜಯ್ ದೇವ್ಗನ್ ಸಹ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ. ''12 ವರ್ಷಗಳ ಹಿಂದೆ ಭಾರತೀಯ ಚಿತ್ರರಂಗಕ್ಕೆ ನಾವು ಅದ್ಭುತ ಸಿನಿಮಾ ನೀಡಿದ್ದೆವು. ಹಲವು ವರ್ಷಗಳಿಂದ ನಾವು ಪಡೆಯುತ್ತಿರುವ ಪ್ರೀತಿಯಿಂದ ಇದೀಗ ಸಿಂಘಮ್ ಕುಟುಂಬ ದೊಡ್ಡದಾಗಿದೆ. ಸಿಂಘಮ್ ಅಗೈನ್ನೊಂದಿಗೆ ನಮ್ಮ ಫ್ರ್ಯಾಂಚೈಸಿಯನ್ನು ಮುನ್ನಡೆಸುತ್ತಿದ್ದೇವೆ'' ಎಂದು ತಿಳಿಸಿದ್ದಾರೆ.