ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣ ಮುಂಬೈ (ಮಹಾರಾಷ್ಟ್ರ): ಟಿವಿ ಧಾರಾವಾಹಿಯೊಂದರ ಸೆಟ್‌ನಲ್ಲೇ ಕಿರುತೆರೆ ನಟಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರರಂಗವನ್ನು ಬೆಚ್ಚಿ ಬೀಳಿಸಿದೆ. ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹನಟ ಶೀಝಾನ್ ಖಾನ್ (Sheezan Khan) ಅವರನ್ನು ಪೊಲೀಸರು ಬಂಧಿಸಿ ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಘಟನೆ: ಮುಂಬೈ ಸಮೀಪದ ನೈಗಾಂವ್ ಪ್ರದೇಶದ ಸೆಟ್‌ನಲ್ಲಿ ಶೂಟಿಂಗ್ ನಡೆಯುತ್ತಿರುವಾಗಲೇ ಮೇಕಪ್ ರೂಮ್ನಲ್ಲಿ ಶನಿವಾರ ಮಧ್ಯಾಹ್ನದ ಸಮಯದಲ್ಲಿ ನಟಿ ತುನಿಶಾ ಶರ್ಮಾ ಆತ್ಮಹತ್ಯೆಗೆ ಯತ್ನಿಸಿದ್ದರು. ಆ ಕೂಡಲೇ ಅವರನ್ನು ಆಸ್ಪತ್ರೆಗೆ ರವಾನಿಸಲಾಯಿತು. ಆದರೆ, ಆಸ್ಪತ್ರೆಯಲ್ಲಿ ನಟಿ ಸಾವನ್ನಪ್ಪಿದ್ದಾರೆಂದು ಘೋಷಿಸಲಾಯಿತು.
ಗೆಳೆಯನ ಮೇಲಿನ ಆರೋಪ:ಮೂಲಗಳ ಪ್ರಕಾರ ನಟಿ ತುನಿಶಾ ಶರ್ಮಾ ಗರ್ಭಿಣಿಯಾಗಿದ್ದರು. ಅವರ ಗೆಳೆಯ ಮದುವೆಯಾಗಲು ನಿರಾಕರಿಸಿದ್ದ. ಇದರಿಂದ ಮನನೊಂದು ಆತ್ಮಹತ್ಯೆಗೆ ತುನೀಶಾ ಶರ್ಮಾ ಯತ್ನಿಸಿದ್ದರು ಎಂದು ತಿಳಿದು ಬಂದಿದೆ.
ಶೀಝಾನ್ ಖಾನ್ ಪೊಲೀಸ್ ಕಸ್ಟಡಿಗೆ: ಇಂದು ಮುಂಬೈನ ವಸಾಯಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಶೀಝಾನ್ ಖಾನ್ ಅವರನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದಡಿ ಅವರನ್ನು ಬಂಧಿಸಲಾಯಿತು.
ದಿವಂಗತ ತುನಿಶಾ ಶರ್ಮಾ ಅವರ ತಾಯಿ ನೀಡಿದ ದೂರಿನ ಆಧಾರದ ಮೇಲೆ ಶೀಝಾನ್ ಅವರನ್ನು ಬಂಧಿಸಲಾಯಿತು. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 306 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವಾಲೀವ್ ಪೊಲೀಸರು ಇಂದು ಬೆಳಗ್ಗೆ ಮಾಹಿತಿ ನೀಡಿದ್ದಾರೆ. ಆದರೆ, ಶೀಝಾನ್ ಖಾನ್ ವಿರುದ್ಧದ ಆರೋಪ ನಿರಾಧಾರ ಎಂದು ಅವರ ವಕೀಲರಾದ ಶರದ್ ರೈ ಹೇಳಿದ್ದಾರೆ.
ಪೊಲೀಸರು ಹೇಳಿದ್ದೇನು?ತುನಿಶಾ ಶರ್ಮಾ ಅವರ ಆತ್ಮಹತ್ಯೆ ನಿರ್ಧಾರಕ್ಕೆ ಹದಿನೈದು ದಿನಗಳ ಹಿಂದೆ ಸಹ ನಟ ಶೀಝಾನ್ ಖಾನ್ ಅವರೊಂದಿಗೆ ಮುರಿದು ಬಿದ್ದಿರಬಹುದು ಎಂದು ಮುಂಬೈ ಪೊಲೀಸರು ಇಂದು ಬೆಳಗ್ಗೆ ಬಹಿರಂಗ ಪಡಿಸಿದ್ದಾರೆ.
ನಟ ಪಾರ್ಥ್ ಝುಟ್ಶಿ ವಿಚಾರಣೆ: ಮತ್ತೋರ್ವ ಸಹ ನಟ ಪಾರ್ಥ್ ಝುಟ್ಶಿ (Parth Zutshi) ಅವರನ್ನು ಇಂದು ಪೊಲೀಸರು ವಿಚಾರಣೆ ನಡೆಸಿದ್ದಾರೆ: ಸುದ್ದಿಗಾರರೊಂದಿಗೆ ಮಾತನಾಡಿದ ಪಾರ್ಥ್ ಝುಟ್ಶಿ, "ಪೊಲೀಸರು ನನ್ನನ್ನು ವಿಚಾರಣೆಗೆ ಕರೆದರು. ನನ್ನಲ್ಲಿ ಸಾಮಾನ್ಯ ಪ್ರಶ್ನೆಗಳನ್ನು ಕೇಳಿದರು. ನಾನು ತುನೀಶಾ ಶರ್ಮಾ ಅವರ ಸಂಬಂಧಗಳ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ, ನನಗೆ ಯಾವುದೇ ಐಡಿಯಾ ಇಲ್ಲ, ಅದು ಅವರ ಆಂತರಿಕ ವಿಷಯ. ಘಟನೆ ಸಂಭವಿಸಿದ ನಂತರ ನನಗೆ ವಿಷಯ ಮುಟ್ಟಿತು. ಬಳಿಕ ಅವರು ಮೃತಪಟ್ಟಿದ್ದಾರೆಂದು ಘೋಷಿಸಲಾಯಿತು ಎಂದು ಮಾಹಿತಿ ಹಂಚಿಕೊಂಡರು.
ತುನಿಶಾ ಶರ್ಮಾ ಮರಣೋತ್ತರ ಪರೀಕ್ಷೆ: 20 ವರ್ಷದ ತುನಿಶಾ ಶರ್ಮಾ ಶನಿವಾರ ತನ್ನ ಮೇಕಪ್ ರೂಮ್ನ ವಾಶ್ ರೂಂನಲ್ಲಿ ಬಿದ್ದಿದ್ದರು. ತಮ್ಮ ವಾಶ್‌ರೂಮ್‌ಗೆ ಹೋದ ಬಳಿಕ ಬಹಳ ಸಮಯದವರೆಗೆ ಹಿಂತಿರುಗಲಿಲ್ಲ. ಆಗಲೇ ನಟಿ ಪ್ರಾಣ ಕಳೆದುಕೊಂಡಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ಜೆಜೆ ಆಸ್ಪತ್ರೆಗೆ ಕಳುಹಿಸಲಾಗಿತ್ತು. ವರದಿಯಲ್ಲಿ ಇದು ಆತ್ಮಹತ್ಯೆ ಎಂದು ಬಂದಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ತುನಿಶಾ ಶರ್ಮಾ ವೃತ್ತಿಜೀವನ ಹೇಗಿತ್ತು? 2015ರಲ್ಲಿ ಭಾರತ್ ಕಾ ವೀರ್ ಪುತ್ರ ಮಹಾರಾಣಾ ಪ್ರತಾಪ್ ಧಾರಾವಾಹಿ ಮೂಲಕ ತುನಿಶಾ ಶರ್ಮಾ ಕಿರುತೆರೆ ಲೋಕಕ್ಕೆ ಕಾಲಿಟ್ಟರು. ಅದಾದ ಬಳಿಕ ಚಕ್ರವರ್ತಿ ಅಶೋಕ್ ಸಾಮ್ರಾಟ್, ಇಷ್ಕ್ ಸುಭಾನ್ ಅಲ್ಲಾ, ಇಂಟರ್ನೆಟ್ ವಾಲಾ ಲವ್ ಧಾರಾವಾಹಿಯಲ್ಲಿ ನಟಿಸಿ ಮನೆ ಮಾತಾಗಿದ್ದರು.
ಇದನ್ನೂ ಓದಿ:ಟಿವಿ ಧಾರಾವಾಹಿ ಸೆಟ್‌ನಲ್ಲೇ ಕಿರುತೆರೆ ನಟಿ ಆತ್ಮಹತ್ಯೆ
ನಟಿ ಕತ್ರಿನಾ ಕೈಫ್ ಅಭಿಯನದ ಫಿತೂರ್ ಚಿತ್ರದ ಮೂಲಕ ಚಿತ್ರರಂಗಕ್ಕೂ ತುನಿಶಾ ಶರ್ಮಾ ಕಾಲಿಟ್ಟಿದ್ದರು. ಇದರಲ್ಲಿ ಬಾಲ ಫಿರ್ದೌಸ್ ಪಾತ್ರವನ್ನು ನಿರ್ವಹಿಸಿದ್ದರು. ಅಲ್ಲದೇ, ಕತ್ರಿನಾ ನಟಿಸಿದ್ದ ಬಾರ್ ಬಾರ್ ದೇಖೋ ಚಿತ್ರದಲ್ಲೂ ತುನಿಶಾ ಶರ್ಮಾ ಬಣ್ಣ ಹಚ್ಚಿಸಿದ್ದರು. ಈ ಚಿತ್ರದಲ್ಲಿ ಯುವ ದಿಯಾ ಪಾತ್ರವನ್ನು ನಿರ್ವಹಿಸಿದ್ದರು. ಈ ಎರಡೂ ಚಿತ್ರಗಳಲ್ಲಿ ತುನಿಶಾ ಅವರು ಕತ್ರಿನಾ ಕೈಫ್ ಪಾತ್ರದ ಬಾಲ ನಟಿಯಾಗಿ ನಟಿಸಿದ್ದರು. ದಬಾಂಗ್ - 3 ಮುಂತಾದ ಚಿತ್ರಗಳಲ್ಲಿಯೂ ತುನಿಶಾ ಶರ್ಮಾ ಕಾಣಿಸಿಕೊಂಡಿದ್ದಾರೆ.