ಬಾಲಿವುಡ್ ರೊಮ್ಯಾಂಟಿಕ್ ಹೀರೋ ಎಂದೇ ಖ್ಯಾತರಾದ ಶಾರುಖ್ ಖಾನ್ ಆ್ಯಕ್ಷನ್ ಅವತಾರದಲ್ಲಿ ಪ್ರೇಕ್ಷಕರಿಗೆ ವಿಶೇಷ ದರ್ಶನ ಕೊಟ್ಟಿರುವ 'ಪಠಾಣ್' ಸಿನಿಮಾ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿ ದಾಖಲೆ ಸೃಷ್ಟಿಸಿದೆ. ಈಗಾಗಲೇ ನಿರ್ಮಾಣವಾಗಿದ್ದ ಹಲವು ಪ್ರಮುಖ ದಾಖಲೆಗಳು ಪುಡಿ ಪುಡಿಯಾಗಿದೆ. ಕೇವಲ 12 ದಿನಗಳಲ್ಲಿ 832 ಕೋಟಿ ರೂಪಾಯಿ ಸಂಗ್ರಹಿಸಿ ಈ ವರ್ಷದ ಸೂಪರ್ ಹಿಟ್ ಸಿನಿಮಾ ಆಗಿ ಹೊರಹೊಮ್ಮಿದೆ. ಶಾರುಖ್ ಖಾನ್ ಜೊತೆ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಕೂಡ ಅತ್ಯುತ್ತಮವಾಗಿ ಅಭಿನಯಿಸಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದಾರೆ. ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಈ ಚಿತ್ರದಲ್ಲಿ ಅತಿಥಿ ಪಾತ್ರ ವಹಿಸಿ ಸಿನಿಮಾದ ತೂಕ ಹೆಚ್ಚಿಸಿದ್ದಾರೆ.
'ಪಠಾಣ್'ನಲ್ಲಿ ಬಿಗ್ ಸ್ಟಾರ್ಸ್:ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾಣ್ ಚಿತ್ರದಲ್ಲಿ ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ತೆರೆ ಹಂಚಿಕೊಂಡಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳ ಮೊಗದಲ್ಲಿ ಸಂತಸ ತರಿಸಿದ್ದಾರೆ. ಇಬ್ಬರೂ ನಟರು 'ಪಠಾಣ್' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿರುವ ಬಗ್ಗೆ ಮಾತನಾಡಿದ್ದಾರೆ.
ಸಲ್ಮಾನ್ ಖಾನ್ ಹೀಗಂದ್ರು:ಸಲ್ಮಾನ್ ಖಾನ್ ಮಾತನಾಡಿ, ಶಾರುಖ್ ಮತ್ತು ನಾನು ದೊಡ್ಡ ಪರದೆಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲು ವಿಶೇಷ ಚಿತ್ರವೊಂದು ಬರುತ್ತದೆ. 'ಪಠಾಣ್' ಆ ಚಿತ್ರವಾಗಿದೆ ಎಂದು ನನಗೆ ಖುಷಿ ಆಗಿದೆ. ನಾವು 'ಕರಣ್ ಅರ್ಜುನ್' ಸಿನಿಮಾ ಮಾಡಿದಾಗ ಅದು ಬ್ಲಾಕ್ಬಸ್ಟರ್ ಆಗಿತ್ತು. ಸದ್ಯ ಯಶ್ ರಾಜ್ ಫಿಲ್ಮ್ಸ್ನ ಪಠಾಣ್ ಕೂಡ ಸೂಪರ್ ಹಿಟ್ ಸಿನಿಮಾ ಆಗಿ ಹೊರಹೊಮ್ಮಿದೆ ಎಂದು ತಿಳಿಸಿದರು.
ಸಿನಿ ಪ್ರಿಯರು ನಮ್ಮನ್ನು ಒಟ್ಟಿಗೆ ತೆರೆ ಮೇಲೆ ನೋಡಲು ಇಷ್ಟಪಡುತ್ತಾರೆ ಎಂದು ನನಗೆ ತಿಳಿದಿದೆ. ಪಠಾಣ್‌ನಲ್ಲಿ ನಮಗೆ ಪ್ರೀತಿ ನೀಡಿದ್ದಕ್ಕಾಗಿ ನನಗೆ ಬಹಳ ಸಂತೋಷ ಆಗಿದೆ. ಸಿನಿಮಾದಲ್ಲಿನ ನನ್ನ ನಟನೆ ಬಗ್ಗೆ ಆದಿ (ನಿರ್ಮಾಪಕ ಆದಿತ್ಯ ಚೋಪ್ರಾ) ಹೇಳಿದಾಗ, ಮತ್ತೆ ನಮ್ಮಿಬ್ಬರನ್ನು ತೆರೆಯ ಮೇಲೆ ಒಂದಾಗಿಸುವ ಅವರ ದೃಷ್ಠಿಕೋನದ ಬಗ್ಗೆ ಹೇಳಿದಾಗ ನನ್ನ ಖುಷಿಗೆ ಪಾರವೇ ಇರಲಿಲ್ಲ ಎಂದು ಸಲ್ಮಾನ್ ಖಾನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.