ಗುವಾಹಟಿ (ಅಸ್ಸೋಂ): ಬಾಲಿವುಡ್ನ ಬಹು ನಿರೀಕ್ಷಿತ ಸಿನಿಮಾ ಪಠಾಣ್ ಬಿಡುಗಡೆಗೆ ಇನ್ನೆರಡು ದಿನಗಳು ಮಾತ್ರ ಬಾಕಿ ಉಳಿದಿವೆ. ಆದ್ರೆ ಕಳೆದ ಕೆಲ ದಿನಗಳ ಹಿಂದೆ ಬೇಶರಂ ರಂಗ್ ಹಾಡಿನ ಹಿನ್ನೆಲೆಯಲ್ಲಿ ಭುಗಿಲೆದ್ದ ಆಕ್ರೋಶ ಇನ್ನೂ ಹಲವೆಡೆ ಮುಂದುವರಿದಿದೆ. ಅಸ್ಸೋಂ ರಾಜ್ಯದಲ್ಲಿ ಪಠಾಣ್ ವಿರುದ್ಧ ಪ್ರತಿಭಟನೆ ನಡೆದಿತ್ತು. ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರಲ್ಲಿ ಮಾಧ್ಯಮದವರು ಪ್ರತಿಕ್ರಿಯೆ ಕೇಳಿದ್ದು, "ಶಾರುಖ್ ಖಾನ್ ಯಾರು?" ಎಂದು ಪ್ರಶ್ನಿಸಿದ್ದರು. ಈ ಬೆಳವಣಿಗೆಯ ಬಳಿಕ ಅಸ್ಸೋಂ ಸಿಎಂ ಇದೀಗ ಪಠಾಣ್ ಪ್ರದರ್ಶನಕ್ಕೆ ಬೆಂಬಲ ಸೂಚಿಸಿದ್ದಾರೆ. ಸೂಪರ್ ಸ್ಟಾರ್ ಶಾರುಖ್ ಖಾನ್ ರಾತ್ರೋರಾತ್ರಿ ಅಸ್ಸೋಂ ಮುಖ್ಯಮಂತ್ರಿಗೆ ಕರೆ ಮಾಡಿದ್ದೇ ಈ ಬೆಳವಣಿಗೆಗೆ ಕಾರಣ ಎಂದು ಹೇಳಲಾಗುತ್ತಿದೆ.
ಅಸ್ಸೋಂ ಸಿಎಂಗೆ ಶಾರುಖ್ ಕರೆ: "ಶಾರುಖ್ ಖಾನ್ ಯಾರು?" ಎಂದು ಹಿಮಂತ ಬಿಸ್ವಾ ಶರ್ಮಾ ಅವರು ಬಾಲಿವುಡ್ ಬಾದ್‌ಶಾ ಅವರನ್ನು ಖಂಡಿಸಿದ ಒಂದು ದಿನದ ನಂತರ, ನಟ ಗುವಾಹಟಿಯಲ್ಲಿ ನಡೆದ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಲು ಮುಖ್ಯಮಂತ್ರಿ ಅವರಿಗೆ ಕರೆ ಮಾಡಿದ್ದರು. ತಮ್ಮ ಚಿತ್ರದ ಪ್ರದರ್ಶನದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯುವುದಿಲ್ಲ ಮತ್ತು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಶಾರುಖ್ ಖಾನ್ ಅವರಿಗೆ ಸಿಎಂ ಭರವಸೆ ನೀಡಿದ್ದಾರೆ. ಈ ಬಗ್ಗೆ ಸ್ವತಃ ಸಿಎಂ ಇಂದು ಬೆಳಗ್ಗೆ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಹಿಮಂತ ಬಿಸ್ವಾ ಶರ್ಮಾ ಟ್ವೀಟ್: "ಬಾಲಿವುಡ್ ನಟ ಶಾರುಖ್ ಖಾನ್ ಅವರು ನನಗೆ ಕರೆ ಮಾಡಿದರು. ನಾವು ಇಂದು ಬೆಳಗಿನ ಜಾವ 2 ಗಂಟೆಗೆ ಮಾತನಾಡಿದ್ದೇವೆ. ಅವರು ಗುವಾಹಟಿಯಲ್ಲಿ ನಡೆದ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ನಾನು ಅವರಿಗೆ ಭರವಸೆ ನೀಡಿದ್ದೇನೆ. ನಾವು ವಿಚಾರಣೆ ನಡೆಸುತ್ತೇವೆ ಮತ್ತು ಇಂತಹ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತೇವೆ" ಎಂದು ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದಾರೆ.