ಎಂಭತ್ತರ ದಶಕದಲ್ಲಿ ದ್ವಾರಕೀಶ್ ನಿರ್ಮಾಣದ ಗುರು ಶಿಷ್ಯರು ಚಿತ್ರ ಕನ್ನಡಿಗರ ಮನ ಗಿದ್ದಿತ್ತು. ಈಗ ಆದೇ ಹೆಸರಿನ ಚಿತ್ರ ಮತ್ತೊಮ್ಮೆ ಬರುತ್ತಿದೆ. ಶರಣ್ ಹಾಗೂ ತರುಣ್ ಕಿಶೋರ್ ಸುಧೀರ್ ನಿರ್ಮಿಸಿರುವ ಈ ಚಿತ್ರವನ್ನು ಜಡೇಶ್ ಕೆ ಹಂಪಿ ನಿರ್ದೇಶಿಸಿದ್ದಾರೆ. ಶರಣ್ ಅವರಿಗೆ ನಿಶ್ವಿಕಾ ನಾಯ್ಡು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ದೇಸಿ ಕ್ರೀಡೆಯಾದ ಖೊಖೊ ಆಟದ ಸುತ್ತ ಈ ಚಿತ್ರದ ಕಥೆ ಹೆಣೆಯಲಾಗಿದೆ. ಚಿತ್ರದಲ್ಲಿ ಶರಣ್ ಖೊಖೊ ಕೋಚರ್ ಆಗಿ ಕಾಣಿಸಿಕೊಂಡಿದ್ದಾರೆ. ಹದಿಮೂರು ಜನ ಖೊಖೊ ಆಟಗಾರರ ಪಾತ್ರದಲ್ಲಿ ಆರು ಜನ ಸಿನಿರಂಗದ ನಟರ ಪುತ್ರರು ನಟಿಸಿದ್ದು ವಿಶೇಷ.
ಶರಣ್ ಪುತ್ರ ಹೃದಯ್, ಪ್ರೇಮ್(ನೆನಪಿರಲಿ) ಪುತ್ರ ಏಕಾಂತ್, ರವಿಶಂಕರ್ ಗೌಡ ಪುತ್ರ ಸೂರ್ಯ, ನವೀನ್ ಕೃಷ್ಣ ಪುತ್ರ ಹರ್ಷಿತ್, ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಹಾಗೂ ಶಾಸಕ ರಾಜು ಗೌಡ ಅವರ ಪುತ್ರ ಮಣಿಕಂಠ ಈ ಚಿತ್ರದಲ್ಲಿ ನಟಿಸಿದ್ದಾರೆ. ಇವರಲ್ಲದೇ ಆಸಿಫ್ ಮುಲ್ಲಾ, ಸಾಂಬಶಿವ, ಸಂದೇಶ್, ಸಾಗರ್, ರುದ್ರಗೌಡ, ಅನುಪ್ ರಾಮಣ್ಣ ಮತ್ತು ಅಮಿತ್ ಬಿ ಕೂಡ ಖೊಖೊ ಆಟಗಾರರಾಗಿ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಹಿರಿಯ ನಟ ದ್ವಾರಕೀಶ್, ನಾಯಕರಾದ ದುನಿಯಾ ವಿಜಯ್ ಹಾಗೂ ಪ್ರಜ್ವಲ್ ದೇವರಾಜ್ ಸೇರಿ ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದರು. ಇದೇ ವೇಳೆ, ಹಿರಿಯ ಕಲಾವಿದರಾದ ದ್ವಾರಕೀಶ್, ಎಂ.ಎಸ್.ಉಮೇಶ್, ಎಂ.ಎನ್ ಲಕ್ಷ್ಮೀದೇವಿ ಹಾಗೂ ಡಿಂಗ್ರಿ ನಾಗರಾಜ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಹಿರಿಯರು ಚಿತ್ರತಂಡಕ್ಕೆ ಮನತುಂಬಿ ಹಾರೈಸಿದರು.
ಶರಣ್, ಪ್ರೇಮ್, ರವಿಶಂಕರ್ ಗೌಡ, ನವೀನ್ ಕೃಷ್ಣ ಹಾಗೂ ರಾಜು ಗೌಡ ದಂಪತಿ ತಮ್ಮ ಮಕ್ಕಳು ಈ ಸಿನಿಮಾಗೆ ಆಯ್ಕೆಯಾದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಎಲ್ಲ ಹುಡಗರು ತಮ್ಮ ಅನುಭವ ಹಂಚಿಕೊಂಡರು. ಚಿತ್ರ ಸಾಗಿ ಬಂದ ಕುರಿತು "ಜಂಟಲ್ ಮನ್" ಖ್ಯಾತಿಯ ನಿರ್ದೇಶಕ ಜಡೇಶ್ ಕೆ ಹಂಪಿ ಮಾಹಿತಿ ನೀಡಿದರು. ಉತ್ತಮ ಪಾತ್ರ ನೀಡಿರುವುದಕ್ಕೆ ನಿಶ್ವಿಕಾ ನಾಯ್ಡು ಧನ್ಯವಾದ ತಿಳಿಸಿದರು. ಈಗಾಗಲೇ ಬಿಡುಗಡೆಯಾಗಿರುವ ಹಾಡು ಹಿಟ್ ಆಗಿರುವುದಕ್ಕೆ ಅಜನೀಶ್ ಲೋಕನಾಥ್ ಸಂತೋಷಪಟ್ಟರು.