ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿ ಮುಖ್ಯಭೂಮಿಕೆಯ ಸತ್ಯಪ್ರೇಮ್ ಕಿ ಕಥಾ (Satyaprem Ki Katha) ಗುರುವಾರದಂದು ಈದ್ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ರೊಮ್ಯಾಂಟಿಕ್ ಲವ್ ಸ್ಟೋರಿಯನ್ನು ಸಿನಿಪ್ರಿಯರು ಮೆಚ್ಚಿಕೊಂಡಿದ್ದಾರೆ. ಈ ಮೊದಲೇ ಅಂದಾಜಿಸಿದಂತೆ ಸಿನಿಮಾ ಉತ್ತಮ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿದೆ. ಗುರುವಾರ ಸುಮಾರು 9 ಕೋಟಿ ರೂಪಾಯಿಗಳನ್ನು ಗಳಿಸುವಲ್ಲಿ ಸತ್ಯಪ್ರೇಮ್ ಕಿ ಕಥಾ ಯಶ ಕಂಡಿದೆ. ಆದ್ರೆ ಈ ಕಲೆಕ್ಷನ್ ಸಂಖ್ಯೆ ಜೋಡಿಯ ಈ ಹಿಂದಿನ ಸಿನಿಮಾ ಭೂಲ್ ಭುಲೈಯಾ 2 ಗಳಿಕೆಗಿಂತ ಕಡಿಮೆ ಇದೆ.
ಸತ್ಯಪ್ರೇಮ್ ಕಿ ಕಥಾ ಸಿನಿಮಾ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಸ್ವೀಕರಿಸುತ್ತಿದೆ. ಮುಂಬರುವ ದಿನಗಳಲ್ಲಿ ಸಕಾರಾತ್ಮಕ ವಿಮರ್ಷೆಯ ಪ್ರಯೋಜನವನ್ನು ಈ ಚಿತ್ರ ಪಡೆಯುವ ನಿರೀಕ್ಷೆಯಿದೆ. ಸಮೀರ್ ವಿದ್ವಾನ್ಸ್ ನಿರ್ದೇಶನದಲ್ಲಿ ಮೂಡಿ ಬಮದಿರುವ ಈ ಸಿನಿಮಾದಲ್ಲಿ ಸುಪ್ರಿಯಾ ಪಾಠಕ್, ಗಜ್ರಾಜ್ ರಾವ್, ರಾಜ್ಪಾಲ್ ಯಾದವ್, ಶಿಖಾ ತಲ್ಸಾನಿಯಾ, ಸಿದ್ಧಾರ್ಥ್ ರಂಧೇರಿಯಾ, ಅನೂರಾಧ ಪಟೇಲ್ ಮತ್ತು ನಿರ್ಮಿರ್ ಸಾವಂತ್ ಅವರೂ ಕೂಡ ನಟಿಸಿದ್ದಾರೆ.
ಸತ್ಯಪ್ರೇಮ್ ಕಿ ಕಥಾ ಸಿನಿಮಾ ಗುರುವಾರ 9 ಕೋಟಿ ರೂಪಾಯಿಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ. ಈದ್ ರಜೆ ಹಿನ್ನೆಲೆ ಚಿತ್ರವು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನ ಚಿತ್ರಮಂದಿರಕ್ಕೆ ಸೆಳೆಯಿತು. ಶುಕ್ರವಾರ ಅಂದರೆ ಎರಡನೇ ದಿನ ಚಿತ್ರ ಯಾವ ರೀತಿ ಪ್ರದರ್ಶನ ಕಾಣಲಿದೆ ಎಂಬುದು ಸಿನಿ ತಜ್ಞರ ಕುತೂಹಲ. ಮೂರು ಮತ್ತು ನಾಲ್ಕನೇ ದಿನ ವಾರಾಂತ್ಯ ಆದ ಹಿನ್ನೆಲೆ ಸಿನಿಮಾ ಉತ್ತಮ ಕಲೆಕ್ಷನ್ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.
ಸಿನಿಮಾ ವ್ಯವಹಾರ ವಿಶ್ಲೇಷಕ ಸುಮಿತ್ ಕಡೆಲ್ ಟ್ವೀಟ್ ಪ್ರಕಾರ, ಸತ್ಯಪ್ರೇಮ್ ಕಿ ಕಥಾ ಬುಧವಾರ ರಾತ್ರಿ 10 ಗಂಟೆಯೊಳಗೆ 51,500 ಟಿಕೆಟ್‌ಗಳನ್ನು ಮಾರಾಟ ಮಾಡಿತು. ಇದು ಸಾಂಕ್ರಾಮಿಕ ಕಾಲದ ನಂತರ ಮೀಡಿಯಂ ಬಜೆಟ್ ಸಿನಿಮಾದ ಅತ್ಯುತ್ತಮ ವ್ಯವಹಾರ. ಆದಾಗ್ಯೂ, ಸಿನಿಮಾದ ಮೊದಲ ದಿನದ ಗಳಿಕೆಯು ಕಾರ್ತಿಕ್ ಮತ್ತು ಕಿಯಾರಾ ಅವರ 2022ರ ಬ್ಲಾಕ್‌ಬಸ್ಟರ್ ಭೂಲ್ ಭುಲೈಯಾ 2 ಕ್ಕಿಂತ ಕಡಿಮೆಯಾಗಿದೆ. ಕಾರ್ತಿಕ್ ಕಿಯಾರಾ ತೆರೆ ಹಂಚಿಕೊಂಡ ಮೊದಲ ಸಿನಿಮಾ ಭೂಲ್ ಭುಲೈಯಾ 2 ತೆರೆಕಂಡ ಮೊದಲ ದಿನ 14 ಕೋಟಿ ರೂಪಾಯಿಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿ ಆಗಿತ್ತು. ಇನ್ನೂ ಚಿತ್ರಮಂದಿರಗಳಲ್ಲಿ ಕೊನೆಯದಾಗಿ ತೆರೆಕಂಡ ಕಾರ್ತಿಕ್ ಆರ್ಯನ್ ಅವರ ಶೆಹಜಾದ ಸಿನಿಮಾ ಮೊದಲ ದಿನ 6 ಕೋಟಿ ರೂಪಾಯಿ ಗಳಿಸಿ ಅಂತಿಮವಾಗಿ ಸಿನಿಮಾ ಸೋತಿತ್ತು. ಅವರ ಈ ಹಿಂದಿನ ಸಿನಿಮಾ ಗಮನಿಸಿದರೆ ಸತ್ಯಪ್ರೇಮ್ ಕಿ ಕಥಾ ಉತ್ತಮ ಕಲೆಕ್ಷನ್ ಮಾಡಲಿದೆ ಎಂಬ ಸೂಚನೆ ಕೊಟ್ಟಿದೆ.
ಇದನ್ನೂ ಓದಿ:ಪೊಲೀಸ್ ಕಾನ್‌ಸ್ಟೇಬಲ್ ಕಷ್ಟ ಸುಖಗಳನ್ನು ಹೇಳಲು ಬರುತ್ತಿದ್ದಾರೆ 'ಲಾಫಿಂಗ್ ಬುದ್ಧ'
2022ರಲ್ಲಿ ತೆರೆಕಂಡು ಬ್ಲಾಕ್‌ಬಸ್ಟರ್ ಆದ ಭೂಲ್ ಭುಲೈಯಾ 2ರ ನಂತರ 'ಸತ್ಯಪ್ರೇಮ್ ಕಿ ಕಥಾ' ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿ ಒಟ್ಟಾಗಿ ಕೆಲಸ ಮಾಡಿರುವ ಮತ್ತೊಂದು ಚಿತ್ರ. ಈ ಪ್ರೇಮಕಥೆಯುಳ್ಳ ಸಿನಿಮಾ ಮೇಲೆ ಸಿನಿಪ್ರಿಯರು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಪ್ರೇಕ್ಷಕರು ಚಿತ್ರದ ನಸೀಬ್ ಸೇ, ಆಜ್ ಕೆ ಬಾದ್, ಪಸೂರಿ ನು ಮತ್ತು ಗುಜ್ಜು ಪಟಾಕಾ ಹಾಡುಗಳನ್ನು ಇಷ್ಟಪಟ್ಟಿದ್ದಾರೆ. ಇಂದು ಸಿನಿಮಾ ನೋಡಿದವರು ಈ ಜೋಡಿಯ ನಟನೆ ಮತ್ತು ಕಥೆಗೆ ಮೆಚ್ಚುಗೆ ಸೂಚಿಸಿದ್ದಾರೆ.
ಇದನ್ನೂ ಓದಿ:'ಅಪರೂಪ'ದ ಪ್ರೇಮಕಥೆ ಹೇಳಲು ಬರುತ್ತಿದ್ದಾರೆ ಅರಸು ಸಿನಿಮಾ ನಿರ್ದೇಶಕ