ಒಳ್ಳೆಯ ಕಂಟೆಂಟ್, ಇಂಪಾದ ಹಾಡುಗಳೊಂದಿಗೆ 12 ವರ್ಷಗಳ ಹಿಂದೆ ಸಿಲ್ವರ್‌ಸ್ಕ್ರೀನ್‌ಗೆ ಬಂದಿದ್ದ 'ಸಂಜು ವೆಡ್ಸ್ ಗೀತಾ' ಚಿತ್ರವನ್ನು ಕನ್ನಡ ಸಿನಿಪ್ರಿಯರು ಮೆಚ್ಚಿಕೊಂಡಿದ್ದರು. ಚಿತ್ರ ಸೂಪರ್ ಹಿಟ್ ಆಗಿತ್ತು. ಇದೀಗ ಸೀಕ್ವೆಲ್ ಬರುತ್ತಿದೆ. ಪ್ರೇಕ್ಷಕರ ಕುತೂಹಲವೂ ಹೆಚ್ಚಾಗಿದೆ. ನಾಗಶೇಖರ್ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಬಹುತೇಕ ಮೊದಲ ಭಾಗದಲ್ಲಿದ್ದ ಕಲಾವಿದರೇ ಈ ಚಿತ್ರದಲ್ಲೂ ಮುಂದುವರಿಯುತ್ತಿದ್ದಾರೆ. ಫಾರ್ ಎ ಛೇಂಜ್ ಎಂಬಂತೆ ಮೋಹಕತಾರೆ ರಮ್ಯಾ ಅವರ ಬದಲಿಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸಂಜು ವೆಡ್ಸ್ ಗೀತಾ 2 ಚಿತ್ರದ ಮುಹೂರ್ತ ಹಾಗೂ ಟೀಸರ್ ಬಿಡುಗಡೆ ಸಮಾರಂಭ ನೆರವೇರಿತು. ಮುಹೂರ್ತ (ಮೊದಲ) ದೃಶ್ಯಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಕ್ಲಾಪ್ ಮಾಡಿದ್ರೆ, ನಾಗಶೇಖರ್ ಅವರ ತಾಯಿ ವರಲಕ್ಷ್ಮಿ ಕ್ಯಾಮರಾ ಸ್ವಿಚ್ ಆನ್ ಮಾಡಿದರು. ಬಹುನಿರೀಕ್ಷಿತ ಸಿನಿಮಾವನ್ನು ದಿ. ಪುನೀತ್ ರಾಜ್ಕುಮಾರ್ ಅವರಿಗೆ ಅರ್ಪಣೆ ಮಾಡುವ ಮೂಲಕ ನಾಗಶೇಖರ್ ಅವರು 'ರಾಜರತ್ನ'ನಿಗೆ ಗೌರವ ಸಲ್ಲಿಸಿದರು. ನಟ ಆದಿತ್ಯ ಹಾಗೂ ಅಭಿಷೇಕ್ ಅಂಬರೀಶ್ ಬಂದು ಸಾಥ್ ನೀಡಿದ್ರು.
ವರ್ಣರಂಜಿತ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ನಾಗಶೇಖರ್, ಡೈರೆಕ್ಟರ್ ಎಸ್.ಮಹೇಂದರ್ ಚಿತ್ರದ ಟೀಸರ್ ರಿಲೀಸ್ ಮಾಡಿದ್ದು ಖುಷಿ ಕೊಟ್ಟಿದೆ. ಈ ಸಿನಿಮಾವನ್ನು 5 ವರ್ಷಗಳ ಹಿಂದೆಯೇ ಪ್ರಾರಂಭಿಸಬೇಕಾಗಿತ್ತು. ಆದರೆ ನಾನು ತೆಲುಗು, ತಮಿಳು ಕಡೆ ಹೋದ ಹಿನ್ನೆಲೆ ಆಗಲಿಲ್ಲ. ರಮ್ಯಾ ಅವರು ಈ ಚಿತ್ರದಲ್ಲೂ ಆ್ಯಕ್ಟ್ ಮಾಡಬೇಕಿತ್ತು. ಅದರೆ ರಾಜಕೀಯದಲ್ಲಿ ಬ್ಯುಸಿ ಇದ್ದಾರೆ. ಅವರ ಬದಲಾಗಿ ಈ ಪಾತ್ರಕ್ಕೆ ಮೊದಲು ನನ್ನ ಕಣ್ಣಮುಂದೆ ಬಂದದ್ದೇ ರಚಿತಾ ರಾಮ್. ತಮ್ಮ ಅದ್ಭುತ ಅಭಿನಯದ ಮೂಲಕವೇ ಹೆಸರು ಮಾಡಿದವರು ಎಂದು ತಿಳಿಸಿದರು. ಹಿಂದಿನ ಚಿತ್ರಗಳಲ್ಲಿದ್ದ ಬಹುತೇಕರು ಇದರಲ್ಲೂ ಇರುತ್ತಾರೆ. ನಾನು ಕಥೆಯ ಜೊತೆ ಹಾಡುಗಳಿಗೂ ಹೆಚ್ಚು ಪ್ರಾಮುಖ್ಯತೆ ಕೊಡುತ್ತೇನೆ. ಶ್ರೀಧರ್ ಸಂಭ್ರಮ್ ಅವರಿಗೆ ರಾತ್ರಿ 12 ಗಂಟೆಗೆ ಕಾಲ್ ಮಾಡಿ ಹಾಡುಗಳ ಸನ್ನಿವೇಶ ವಿವರಿಸಿದ್ದೇನೆ. ಅವರು ಸೂಪರ್ ಸಾಂಗ್ಸ್ ಕೊಟ್ಟಿದ್ದಾರೆ. ಅದ್ಭುತವಾದ 5 ಹಾಡುಗಳು ಮೂಡಿ ಬಂದಿದೆ ಎಂದರು.
ರಚಿತಾ ರಾಮ್ ಮಾತನಾಡಿ, ಸಿನಿಮಾ ಲಾಂಚ್ ಇವೆಂಟ್ ಬಹಳ ಗ್ರ್ಯಾಂಡ್ ಆಗಿ ಮಾಡಿದ್ದಾರೆ. ನಾಗಶೇಖರ್ ಅವರ ಜೊತೆ ಫಸ್ಟ್ ಟೈಮ್ ಕೆಲಸ ಮಾಡುತ್ತಿದ್ದೇನೆ. ಚಿತ್ರದ ಬಗ್ಗೆ ಅವರಿಗೆ ಡೆಡಿಕೇಶನ್ ಹೆಚ್ಚು. ಅದನ್ನು ಫೋಟೋಶೂಟ್ ಸಮಯದಲ್ಲೇ ನೋಡಿದೆ. ನನ್ನ ಪಾತ್ರಕ್ಕೆ ನ್ಯಾಯ ಒದಗಿಸುವ ಪೂರ್ಣ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.