ಒಳ್ಳೆಯ ಕಂಟೆಂಟ್, ಇಂಪಾದ ಹಾಡುಗಳೊಂದಿಗೆ 12 ವರ್ಷಗಳ ಹಿಂದೆ ಬೆಳ್ಳಿ ತೆರೆಗೆ ಬಂದಿದ್ದ 'ಸಂಜು ವೆಡ್ಸ್ ಗೀತಾ' ಚಿತ್ರವನ್ನು ಕನ್ನಡ ಸಿನಿಪ್ರಿಯರು ಮೆಚ್ಚಿಕೊಂಡಿದ್ದರು. ಚಿತ್ರ ಸೂಪರ್ ಹಿಟ್ ಆಗಿತ್ತು. ಇದೀಗ ಸೀಕ್ವೆಲ್ ಬರುತ್ತಿದೆ. ಪ್ರೇಕ್ಷಕರ ಕುತೂಹಲವೂ ಹೆಚ್ಚಾಗಿದೆ. ನಾಗಶೇಖರ್ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಬಹುತೇಕ ಮೊದಲ ಭಾಗದಲ್ಲಿದ್ದ ಕಲಾವಿದರೇ ಈ ಚಿತ್ರದಲ್ಲೂ ಮುಂದುವರಿಯುತ್ತಿದ್ದಾರೆ. ಫಾರ್ ಎ ಚೇಂಜ್ ಎಂಬಂತೆ ಮೋಹಕತಾರೆ ರಮ್ಯಾ ಅವರ ಬದಲಿಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿದ್ದಾರೆ.
ಇದೀಗ ಚಿತ್ರತಂಡ ಶೂಟಿಂಗ್ಗಾಗಿ ಸ್ವಿಜರ್ಲ್ಯಾಂಡ್ಗೆ ತೆರಳಿದ್ದಾರೆ. ಸುಂದರ ತಾಣಗಳಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದೆ. ನಟಿ ರಚಿತಾ ರಾಮ್ ಈ ಬಗ್ಗೆ ಅಪ್ಡೇಟ್ ನೀಡಿದ್ದು, ಅಲ್ಲಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸ್ವಿಸ್ ಪದ್ಧತಿಯಂತೆ ನಯಾ ಡ್ರೆಸ್ ತೊಟ್ಟು ಹಿಮದಲ್ಲಿ ಕುಣಿದು ಡಿಂಪಲ್ ಕ್ವೀನ್ ಸಂಭ್ರಮಿಸಿದ್ದಾರೆ. ಸಿನಿಮಾ ಚಿತ್ರೀಕರಣಕ್ಕಾಗಿ ಈ ಉಡುಗೆ ತೊಡಲು ತುಂಬಾ ಥ್ರಿಲ್ ಆಗಿದ್ದೇನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ನಟಿಯ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.
ಈ ಹಿಂದೆ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ ನಿರ್ದೇಶಕ ನಾಗಶೇಖರ್, ''ಸಂಜು ವೆಡ್ಸ್ ಗೀತಾ ಚಿತ್ರಕ್ಕೆ ಸಿಕ್ಕ ಯಶಸ್ಸೇ ಸೀಕ್ವೆಲ್ ನಿರ್ಮಾಣಕ್ಕೆ ಕಾರಣ. ಮೊದಲ ಹಂತದಲ್ಲಿ ಈಗಾಗಲೇ 5-6 ದಿನದ ಶೂಟಿಂಗ್ ನಡೆಸಿದ್ದೇವೆ. ಅಚಾನಕ್ಕಾಗಿ ಒಂದಷ್ಟು ಬದಲಾವಣೆಗಳಾಗಿವೆ. ರಂಗಾಯಣ ರಘು, ಸಾಧು ಕೋಕಿಲ ಉತ್ತಮ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನನ್ನ ಈ ಕನಸಿಗೆ ಎಂಜಿನಿಯರಿಂಗ್ ಕ್ಲಾಸ್ಮೇಟ್ ಕುಮಾರ್ ಜೊತೆಗೂಡಿದ್ದಾರೆ. ನನ್ನ ಈ ಸಿನಿಮಾದಲ್ಲಿ ಹಾಡುಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದೇವೆ. ಶ್ರೀಧರ್ ಸಂಭ್ರಮ್ ಒಳ್ಳೆಯ ಟ್ಯೂನ್ ಕೊಟ್ಟಿದ್ದಾರೆ" ಎಂದು ತಿಳಿಸಿದ್ದರು.