ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮೊದಲ ಬಾರಿಗೆ ಜೊತೆಯಾಗಿರುವ 'ಸಲಾರ್' ಸಿನಿಮಾ ಡಿಸೆಂಬರ್ 22 ರಂದು ತೆರೆಗೆ ಅಪ್ಪಳಿಸಲಿದೆ ಎಂದು ಚಿತ್ರತಂಡ ಘೋಷಣೆ ಮಾಡಿದೆ. ಇದೀಗ ಚಿತ್ರದ ಟ್ರೇಲರ್ ರಿಲೀಸ್ಗಾಗಿ ಕುತೂಹಲದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ.
'ಸಲಾರ್' ತೆಲುಗು ಹಾಗೂ ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ಮತ್ತು ಮಲಯಾಳಂ ಭಾಷೆಗಳಲ್ಲೂ ಬಿಡುಗಡೆಯಾಗಲಿದೆ. ಭಾರತ ಮಾತ್ರವಲ್ಲದೇ ವಿಶ್ವಾದ್ಯಂತ ಅದ್ಧೂರಿಯಾಗಿ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಆದರೆ, ಈಗಾಗಲೇ ರಿಲೀಸ್ ಹಾಗೂ ಟ್ರೇಲರ್ ಡೇಟ್ ಮುಂದೂಡಿಕೆ ಪ್ರಭಾಸ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಇದೀಗ ಚಿತ್ರದ ಬಗ್ಗೆ ಹೊಸ ಅಪ್ಡೇಟ್ ಸಿಕ್ಕಿದ್ದು, ಫ್ಯಾನ್ಸ್ಗೆ ಸಂತಸ ನೀಡಿದೆ.
ಇತ್ತೀಚೆಗೆ ಸಿನಿಮಾದ ಟ್ರೇಲರ್ ನವೆಂಬರ್ ಕೊನೆಯ ವಾರದಲ್ಲಿ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ರಿಲೀಸ್ ಆಗುವ ಸಾಧ್ಯತೆಯಿದೆ ಎಂದು ಇಂಡಸ್ಟ್ರಿ ಬಾಕ್ಸ್ ಆಫೀಸ್ ವಿಶ್ಲೇಷಕ ರಮೇಶ್ ಬಾಲಾ ಎಕ್ಸ್ನಲ್ಲಿ ತಿಳಿಸಿದ್ದರು. ಇದೀಗ ಬಾಲಿವುಡ್ ವಿಮರ್ಶಕ ಮತ್ತು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಅವರು ಡಿಸೆಂಬರ್ 1ರಂದು ಟ್ರೇಲರ್ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಎಕ್ಸ್ ಪೋಸ್ಟ್ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಆದರೆ, ಟ್ರೇಲರ್ ರಿಲೀಸ್ ಕುರಿತು ಚಿತ್ರತಂಡದಿಂದ ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ.